Footpath ಅತಿಕ್ರಮಿಸಿದ ಅನಾಥ ವಾಹನಗಳಿಗೆ ಮುಕ್ತಿ: ‘ಕಸ’ ಜೇಬಿಗಿಳಿಸಿ ಮಾದರಿಯಾದ ಸಚಿವ ಕೃಷ್ಣ ಬೈರೇಗೌಡ!

ಹಂಚಿಕೊಳ್ಳಿ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕ್ವೀನ್ಸ್ ರಸ್ತೆಯಲ್ಲಿ ಫುಟ್‌ಪಾತ್ ಅತಿಕ್ರಮಿಸಿ ದೀರ್ಘಕಾಲದಿಂದ ನಿಲ್ಲಿಸಿದ್ದ ಅನಾಥ ವಾಹನಗಳ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು. 

ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಖುದ್ದಾಗಿ ಕಾರ್ಯಾಚರಣೆಗಿಳಿದ ಸಚಿವರು, ಪಾದಚಾರಿ ಮಾರ್ಗಕ್ಕೆ ಅಡ್ಡಿಯಾಗಿದ್ದ ಅನಾಥ ಕಾರುಗಳ ಮೇಲೆ ತೆರವುಗೊಳಿಸುವಂತೆ ಸೂಚನಾ ನೋಟಿಸ್ (ಸ್ಟಿಕ್ಕರ್) ಅಂಟಿಸುವ ಮೂಲಕ ಗಮನ ಸೆಳೆದರು. ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ನಿಲ್ಲಿಸಿರುವ ಗುಜರಿ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸ್ಪಷ್ಟ ಸಂದೇಶವನ್ನು ಅವರು ರವಾನಿಸಿದರು.

ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ ಅವರು ಪ್ರದರ್ಶಿಸಿದ ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಾಹನಗಳಿಗೆ ನೋಟಿಸ್ ಅಂಟಿಸಿದ ಬಳಿಕ ಉಳಿದ ಸ್ಟಿಕ್ಕರ್ ಕವರ್ ಅನ್ನು ರಸ್ತೆಗೆ ಎಸೆಯುವ ಬದಲು ತಮ್ಮ ಜೇಬಿಗೆ ಇರಿಸಿಕೊಳ್ಳುವ ಮೂಲಕ ಸ್ವಚ್ಛತೆಯೆಡೆಗಿನ ತಮ್ಮ ಬದ್ಧತೆಯನ್ನು ಮೆರೆದರು. ಸ್ವಚ್ಛತೆ ಹಾಗೂ ನಾಗರಿಕ ಜವಾಬ್ದಾರಿಯು ಪ್ರತಿದಿನದ ಸಣ್ಣ ವೈಯಕ್ತಿಕ ಕ್ರಿಯೆಗಳಿಂದಲೇ ಆರಂಭವಾಗುತ್ತದೆ ಎಂಬುದನ್ನು ಅವರು ತಮ್ಮ ನಡೆಯ ಮೂಲಕ ಸಾಬೀತುಪಡಿಸಿದರು. 

ಸಚಿವರ ಈ ನಡೆಗೆ ಹಾಗೂ ಭರ್ಜರಿ ತೆರವು ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬೆಂಗಳೂರು ನಗರದಾದ್ಯಂತ ವಾಹನ ನಿಲುಗಡೆ ಸಮಸ್ಯೆಯನ್ನು ಬಗೆಹರಿಸಿ ಪಾದಚಾರಿ ಮಾರ್ಗಗಳನ್ನು ಸುಗಮಗೊಳಿಸಲು ಇದೇ ರೀತಿಯ ಕಟ್ಟುನಿಟ್ಟಿನ ಕ್ರಮವನ್ನು ನಿರಂತರವಾಗಿ ಜಾರಿಗೊಳಿಸುವಂತೆ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds