ಸ್ಯಾಂಡಲ್‌ವುಡ್‌ನ ನಿರೀಕ್ಷಿತ ‘ಕರಾವಳಿ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಟ ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಬಂದಿದ್ದ ಗುಂಪೊಂದು ಉದ್ದೇಶಪೂರ್ವಕವಾಗಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ರಂಪಾಟ ಮಾಡಿದೆ. ಗುಂಪು ಕಟ್ಟಿಕೊಂಡು ಬಂದಿದ್ದ ಕಿಡಿಗೇಡಿಗಳು ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ಅಲ್ಲಿದ್ದ ಇತರರಿಗೆ ತೀವ್ರ ತೊಂದರೆ ಕೊಟ್ಟಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಇದೀಗ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಸಂಬಂಧ ಕರಾವಳಿ ಸಿನಿಮಾದ ನಿರ್ದೇಶಕ ಗುರುದತ್ ಗಾಣಿಗ ಅವರ ಕಚೇರಿಯ ನಿರ್ವಾಹಕ ಅಧಿಕಾರಿ ನೀಡಿದ ದೂರಿನ ಅನ್ವಯ, ಗಲಾಟೆ ಮಾಡಿದ ದಿಲೀಪ್, ಅವಿನಾಶ್ ಮತ್ತು ನಂದಕುಮಾರ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ಉದ್ದೇಶಪೂರ್ವಕವಾಗಿ ಬಂದು ಈ ಕೃತ್ಯವೆಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಆರೋಪಿಗಳ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆ ಸೆಕ್ಷನ್ 352, 292 ಮತ್ತು 3(5) ಅಡಿಯಲ್ಲಿ ಉಪ್ಪಾರಪೇಟೆ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಆದರೆ, ಪೊಲೀಸ್ ತನಿಖೆ ವೇಳೆ ಈ ಪ್ರಕರಣದ ಅಸಲಿ ಬಣ್ಣ ಬಯಲಾಗಿದ್ದು, ಫ್ಯಾನ್ಸ್ ಸೋಗಿನಲ್ಲಿ ಬಂದು ಗಲಾಟೆ ಮಾಡಿದವರು ನೈಜ ಅಭಿಮಾನಿಗಳಲ್ಲ ಎಂಬುದು ಪತ್ತೆಯಾಗಿದೆ. ಬದಲಾಗಿ, ಈ ಕಿಡಿಗೇಡಿಗಳು ನಟ ಪ್ರಜ್ವಲ್ ದೇವರಾಜ್ ಅವರ ಜೊತೆಗೇ ಕೆಲಸ ಮಾಡುವವರು ಹಾಗೂ ಕರಾವಳಿ ಸಿನಿಮಾದ ಶೂಟಿಂಗ್ ವೇಳೆ ಪ್ರಜ್ವಲ್ ಅವರಿಗೆ ಅಸಿಸ್ಟೆಂಟ್‌ಗಳಾಗಿ ಕೆಲಸ ಮಾಡಿದ್ದವರು ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ.
ವ್ಯವಹಾರದಲ್ಲಿ ಏನಾದರೂ ವ್ಯತ್ಯಾಸವಾಗಿದ್ದಕ್ಕೆ ಸ್ವತಃ ನಟ ಪ್ರಜ್ವಲ್ ದೇವರಾಜ್ ಅವರೇ ತಮ್ಮ ಸಹಾಯಕರಿಗೆ ಕುಮ್ಮಕ್ಕು ನೀಡಿ, ಅಭಿಮಾನಿಗಳ ರೀತಿಯಲ್ಲಿ ಕಳುಹಿಸಿ ಈ ಗಲಾಟೆ ಮಾಡಿಸಿದ್ರಾ ಎಂಬ ಅನುಮಾನಗಳು ಈಗ ದಟ್ಟವಾಗಿವೆ. ಇದಕ್ಕೆ ಪುಷ್ಟಿ ನೀಡುವಂತಹ ಹಲವು ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು, ಪ್ರಕರಣದ ಬೆನ್ನತ್ತಿದ್ದಾರೆ.

Leave a Reply