ಬೆಂಗಳೂರಿನ ನಮ್ಮ ಮೆಟ್ರೋ ಗ್ರೀನ್ ಲೈನ್ ಮಾರ್ಗದಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಮೆಟ್ರೋ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ವಿಳಂಬ ಉಂಟಾಗಿದೆ. ಮಾದಾವರದಿಂದ ತಲಘಟ್ಟಪುರದವರೆಗೆ ಸಂಚರಿಸುವ ಗ್ರೀನ್ ಲೈನ್ ಮಾರ್ಗದಲ್ಲಿ ಈ ಸಮಸ್ಯೆ ಎದುರಾಗಿದ್ದು, ಬಿಎಂಆರ್ ಸಿಎಲ್ (BMRCL) ತಾಂತ್ರಿಕ ಸಿಬ್ಬಂದಿ ದೋಷ ಸರಿಪಡಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ರೈಲುಗಳ ಸಂಚಾರ ವ್ಯತ್ಯಯದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಬಿಎಂಆರ್ ಸಿಎಲ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿಷಾದ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಸೇವೆ ಸಹಜ ಸ್ಥಿತಿಗೆ ಮರಳಲಿದೆ ಎಂದು ತಿಳಿಸಿದೆ.

ಮತ್ತೊಂದೆಡೆ, ಪೀಕ್ ಅವರ್ (Peak hour) ಸಮಯದಲ್ಲಿಯೇ ಈ ಅಡಚಣೆ ಎದುರಾಗಿದ್ದರಿಂದ ಕಚೇರಿಗೆ ತೆರಳುವವರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಯಿತು. ಕೋಣನಕುಂಟೆ ಸೇರಿದಂತೆ ಮಾರ್ಗದ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಗಂಟೆಗಟ್ಟಲೆ ಕಾದು ಸುಸ್ತಾಗಿದ್ದಾರೆ.
ಆದರೆ, ನಿಲ್ದಾಣಗಳಲ್ಲಿ ಈ ಬಗ್ಗೆ ಸೂಕ್ತ ಸಮಯದಲ್ಲಿ ಧ್ವನಿವರ್ಧಕಗಳ ಮೂಲಕ ಯಾವುದೇ ಪ್ರಕಟಣೆ ನೀಡದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಚಿತವಾಗಿ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಉತ್ತಮ ಸಂವಹನ ವ್ಯವಸ್ಥೆಯನ್ನು ಬಿಎಂಆರ್ ಸಿಎಲ್ ರೂಪಿಸಬೇಕು ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.


Leave a Reply