ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಘೋರ ನಿರ್ಲಕ್ಷ್ಯ: Oxygen ಪೈಪ್ ಬ್ಲಾಕ್ ಆಗಿ ರೋಗಿ ಸಾ*ವು!

ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯದ ಕೃತ್ಯವೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಸಕಾಲದಲ್ಲಿ ಆಕ್ಸಿಜನ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ರೋಗಿಯೊಬ್ಬರು ಮೃ*ತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ನಗರದ ನಿವಾಸಿ ಸನಾವುಲ್ಲಾ (49) ಆಕ್ಸಿಜನ್ ಸಿಗದೆ ದುರಂತವಾಗಿ ಸಾ*ವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿತನವೇ ಈ ಸಾವಿಗೆ ನೇರ ಕಾರಣ ಎಂದು ಮೃ*ತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಬ್ಲಾಕ್ ಆಗಿದ್ದ ಆಕ್ಸಿಜನ್ ಪೈಪ್ ಸರಿಪಡಿಸದ ಸಿಬ್ಬಂದಿ

ಸನಾವುಲ್ಲಾ ಅವರಿಗೆ ಅಳವಡಿಸಲಾಗಿದ್ದ ಆಕ್ಸಿಜನ್ ಪೈಪ್ ಬ್ಲಾಕ್ ಆಗಿತ್ತು ಎಂದು ತಿಳಿದುಬಂದಿದೆ. ಇದರಿಂದಾಗಿ ಅವರಿಗೆ ಶ್ವಾಸಕೋಶಕ್ಕೆ ಗಾಳಿ ಸಿಗದೆ ತೀವ್ರವಾಗಿ ನರಳಾಡುತ್ತಿದ್ದರು. ಈ ವಿಷಯವನ್ನು ಗಮನಿಸಿದರೂ ಸಹ ಆಸ್ಪತ್ರೆಯ ಕರ್ತವ್ಯ ನಿರತ ಸಿಬ್ಬಂದಿ ಮಾತ್ರ ಕ್ಯಾರೇ ಎಂದಿಲ್ಲ. ಪೈಪ್ ಬ್ಲಾಕ್ ಆಗಿದ್ದರೂ ಅದನ್ನು ತಕ್ಷಣವೇ ಸರಿಪಡಿಸುವ ಕನಿಷ್ಠ ಸೌಜನ್ಯವನ್ನೂ ತೋರದೆ ರೋಗಿಯನ್ನು ನಿರ್ಲಕ್ಷಿಸಿದ್ದಾರೆ. ಪರಿಣಾಮವಾಗಿ ಉಸಿರಾಡಲು ಸಾಧ್ಯವಾಗದೆ ಸನಾವುಲ್ಲಾ ಆಸ್ಪತ್ರೆಯ ಹಾಸಿಗೆಯ ಮೇಲೆಯೇ ಕೊನೆಯುಸಿರೆಳೆದಿದ್ದಾರೆ.

ವೈದ್ಯಾಧಿಕಾರಿಗಳ ವಿರುದ್ಧ ಜನಾಕ್ರೋಶ, ತನಿಖೆಗೆ ಆಗ್ರಹ

ಇಷ್ಟೊಂದು ದೊಡ್ಡ ಜಿಲ್ಲಾಸ್ಪತ್ರೆಯಾಗಿದ್ದರೂ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಹಾಗೂ ಮೃತರ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಸಂಬಂಧಿಕರು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತೀವ್ರ ತರಾಟೆಗೆ ನಡೆಸಿದ್ದಾರೆ. “ಈ ಅಮಾಯಕನ ಸಾವಿಗೆ ಹೊಣೆ ಯಾರು?” ಎಂದು ಕಣ್ಣೀರಿಡುತ್ತಾ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಆರೋಗ್ಯ ಸಚಿವರು ತಕ್ಷಣವೇ ಈ ಗಂಭೀರ ಪ್ರಕರಣದತ್ತ ಗಮನಹರಿಸಬೇಕು ಮತ್ತು ಜಿಲ್ಲಾಸ್ಪತ್ರೆಯ ಬೇಜವಾಬ್ದಾರಿ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಕುಟುಂಬಸ್ಥರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *