ಪದೇ ಪದೇ ಬಾಂಬ್ ಬೆದರಿಕೆ ಇಮೇಲ್: ಧಾರವಾಡ ನ್ಯಾಯಾಲಯಕ್ಕೆ ಪೊಲೀಸ್ ಕಾವಲು

ಹಂಚಿಕೊಳ್ಳಿ

ಧಾರವಾಡ: ಧಾರವಾಡ ಹೈಕೋರ್ಟ್ ಪೀಠಕ್ಕೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಬಾಂಬ್ ಬೆದರಿಕೆಗಳು (Bomb Threat) ಬರುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಭದ್ರತೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸುಮಾರು 40ಕ್ಕೂ ಹೆಚ್ಚು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇಡೀ ನ್ಯಾಯಾಲಯದ ಆವರಣ ಸದ್ಯ ಕಾವಲು ಪಡಡೆಯ ನಿಗಾದಲ್ಲಿದೆ. ಈ ಹಿಂದೆ ಹೈಕೋರ್ಟ್‌ಗೆ ಎರಡು ಬಾರಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದ ಹಿನ್ನೆಲೆಯಲ್ಲಿ, ಹೈಕೋರ್ಟ್ ಪೀಠದ ವಕೀಲರ ಸಂಘದ ಅಧ್ಯಕ್ಷರು ಭದ್ರತೆ ಹೆಚ್ಚಿಸುವಂತೆ ಗೃಹ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದರು.

ವಕೀಲರ ಸಂಘದ ಪತ್ರಕ್ಕೆ ತಕ್ಷಣ ಸ್ಪಂದಿಸಿರುವ ಗೃಹ ಇಲಾಖೆ, ಧಾರವಾಡ ಪೀಠಕ್ಕೆ ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್, ವಿಶೇಷ ಸರ್ಚ್ ಟೀಮ್ ಹಾಗೂ ವಾಹನ ತಪಾಸಣಾ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ. ಪ್ರಸ್ತುತ ಕೋರ್ಟ್‌ ಆವರಣಕ್ಕೆ ಆಗಮಿಸುವ ಪ್ರತಿಯೊಂದು ವಾಹನವನ್ನು ಸಿಬ್ಬಂದಿ ಕೂಲಂಕಷವಾಗಿ ತಪಾಸಣೆ ನಡೆಸಿದ ಬಳಿಕವೇ ಒಳಗೆ ಬಿಡುತ್ತಿದ್ದಾರೆ. ಇದರೊಂದಿಗೆ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ಹಾಗೂ ಸಾರ್ವಜನಿಕರನ್ನು ಸಹ ತೀವ್ರ ಶೋಧನೆಗೆ ಒಳಪಡಿಸಲಾಗುತ್ತಿದೆ.

ಪ್ರಸಕ್ತ ವರ್ಷದ ಜನವರಿಯಿಂದ ಇಂದಿನವರೆಗೆ ಧಾರವಾಡ ಹೈಕೋರ್ಟ್‌ ಪೀಠಕ್ಕೆ ಎರಡು ಬಾರಿ ಹಾಗೂ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ (Dharwad District Court) ಎರಡು ಬಾರಿ ಸೇರಿದಂತೆ ಒಟ್ಟು ನಾಲ್ಕು ಬಾರಿ ಇಮೇಲ್ ಮುಖಾಂತರ ಬಾಂಬ್ ಇಡುವ ಬೆದರಿಕೆ ಸಂದೇಶಗಳು ಬಂದಿವೆ. ಈ ಸರಣಿ ಬೆದರಿಕೆ ಇಮೇಲ್‌ಗಳು ವಕೀಲರು ಹಾಗೂ ಕಕ್ಷಿದಾರರಲ್ಲಿ ಭೀತಿ ಮೂಡಿಸಿದ್ದು, ಪೊಲೀಸರು ಇಮೇಲ್ ಮೂಲದ ಪತ್ತೆಗಾಗಿ ಸೈಬರ್ ಕ್ರೈಮ್ ವಿಭಾಗದ ನೆರವಿನೊಂದಿಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds