ಮಂಗಳೂರಲ್ಲಿ ಸಿನಿಮಾ ಶೈಲಿ ದರೋಡೆ: ಗಂಡನ ಎದುರೇ ಪತ್ನಿ, ಮಗುವನ್ನು ಕಿಡ್ನಾಪ್

ಮಂಗಳೂರು: ಕರಾವಳಿ ನಗರಿ ಮಂಗಳೂರಿನ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಸಿನೆಮಾ ಮಾದರಿಯ ಭೀಕರ ದರೋಡೆ ಹಾಗೂ ಅಪಹರಣ ಪ್ರಕರಣ ನಡೆದಿದೆ. ಕೇರಳದ ಪಯ್ಯನ್ನೂರು ಮೂಲದ ಚಿನ್ನದ ವ್ಯಾಪಾರಿ ವಿಕಾಸ್ ಎಂಬುವವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮದುವೆ ಮುಗಿಸಿಕೊಂಡು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಇವರ ಕಾರು ಬೈಕಂಪಾಡಿ ದ್ವಾರದ ಬಳಿ ಬರುತ್ತಿದ್ದಂತೆ, ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಹೊಂಚು ಹಾಕಿ ಬಂದಿದ್ದ ದರೋಡೆಕೋರರ ಸಶಸ್ತ್ರ ತಂಡ ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದೆ.

ಕಾರು ನಿಲ್ಲಿಸುತ್ತಿದ್ದಂತೆ ಮುಗಿಬಿದ್ದ ಖದೀಮರು, ವಿಕಾಸ್ ಅವರನ್ನು ಬಲವಂತವಾಗಿ ಹೆದ್ದಾರಿಯಲ್ಲೇ ಕೆಳಗೆ ತಳ್ಳಿ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಕಾರಿನಲ್ಲಿದ್ದ ಅವರ ಪತ್ನಿ ಹಾಗೂ ಮಗುವನ್ನು ಕಾರು ಸಮೇತ ಕಿಡ್ನಾಪ್ ಮಾಡಿಕೊಂಡು ಮುಂದೆ ಸಾಗಿದ್ದಾರೆ. ಕೆಲ ದೂರದ ಕುಳೂರು ಬಳಿ ತಲುಪುತ್ತಿದ್ದಂತೆ ತಾಯಿ-ಮಗುವಿಗೆ ಜೀವಬೆದರಿಕೆ ಹಾಕಿ ಕಾರಿನಿಂದ ಹೊರಕ್ಕೆ ತಳ್ಳಿದ ದರೋಡೆಕೋರರು, ಕಾರಿನಲ್ಲಿದ್ದ ಸುಮಾರು ₹20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ ಹಾಗೂ ಸ್ವಿಫ್ಟ್ ಕಾರಿನೊಂದಿಗೆ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿರುವ ಈ ನಡುರಸ್ತೆ ಹೈಜಾಕ್ ಪ್ರಕರಣದ ತನಿಖೆಯನ್ನು ಪಣಂಬೂರು ಠಾಣೆ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಹೆದ್ದಾರಿಯುದ್ದಕ್ಕೂ ಅಳವಡಿಸಲಾಗಿರುವ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ತಪಾಸಣೆ ನಡೆಸುತ್ತಿದ್ದು, ದರೋಡೆಕೋರರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Leave a Reply

Your email address will not be published. Required fields are marked *