ತುಮಕೂರು ಜಿಲ್ಲೆಯ ಪಾವಗಡ ಹಾಗೂ ಧಾರವಾಡದಲ್ಲಿ ಸಂಭವಿಸಿದ ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು ಮೂವರು ದಾರುಣವಾಗಿ ಸಾ*ವನ್ನಪ್ಪಿದ್ದಾರೆ.
ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಹೊಸ ಬೈಕ್ ಖರೀದಿಸಿದ ಮರುದಿನವೇ ಯುವಕನೋರ್ವ ಟಿಪ್ಪರ್ ಲಾರಿಗೆ ಬ*ಲಿಯಾಗಿದ್ದಾನೆ. ಮೃತ ದುರ್ದೈವಿಯನ್ನು ಪಾವಗಡದ ದೊಡ್ಡಹಳ್ಳಿ ನಿವಾಸಿ 19 ವರ್ಷದ ನಂದೀಶ್ ಕುಮಾರ್ ಎಂದು ಗುರುತಿಸಲಾಗಿದೆ. ನಿನ್ನೆಯಷ್ಟೇ ಹೊಸ ಬೈಕ್ ಖರೀದಿಸಿದ್ದ ನಂದೀಶ್, ತನ್ನ ಸ್ನೇಹಿತನ ಜೊತೆ ಹೊಸ ವಾಹನದಲ್ಲಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದನು. ಈ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಇವರ ಬೈಕ್ ಮೇಲೆ ಹರಿದಿದೆ.
ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ನಂದೀಶ್ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಹಿಂಬದಿ ಕುಳಿತಿದ್ದ ಆತನ ಸ್ನೇಹಿತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮತ್ತೊಂದೆಡೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಳಿ ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ. ಧಾರವಾಡ ತಾಲೂಕಿನ ಹಳೇ ತೇಗೂರಿನ 28 ವರ್ಷದ ಷಣ್ಮುಖ ಜೋಗಿ ಹಾಗೂ ಉತ್ತರ ಪ್ರದೇಶ ಮೂಲದ 30 ವರ್ಷದ ಸಾಗರ್ ಮೃ*ತಪಟ್ಟ ದುರ್ದೈವಿಗಳು. ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯ ಟೈರ್ ಬ್ಲಾಸ್ಟ್ ಆಗಿದ್ದ ಹಿನ್ನೆಲೆಯಲ್ಲಿ, ಚಾಲಕ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ಟೈರ್ ಬದಲಿಸುವ ಕೆಲಸದಲ್ಲಿ ನಿರತನಾಗಿದ್ದನು.
ಇದೇ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ವೇಗವಾಗಿ ಬಂದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಲಾರಿಯ ಹಿಂಬದಿಗೆ ಭೀಕರವಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಗರಗ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply