ಬೆಂಗಳೂರು: ಬಡವರಿಗೆ ಮತ್ತು ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಜನರಿಕ್ ಔಷಧಗಳನ್ನು ಒದಗಿಸುವ ಉದ್ದೇಶದ ‘ಪ್ರಧಾನಮಂತ್ರಿ ಜನೌಷಧಿ ಕೇಂದ್ರ’ಗಳಲ್ಲಿ (Pradhan Mantri Bhartiya Janaushadhi kendra) ಬ್ರ್ಯಾಂಡೆಡ್ ಔಷಧಗಳನ್ನು ಮಾರಾಟ ಮಾಡುತ್ತಿದ್ದ ಆಘಾತಕಾರಿ ದಂಧೆಯನ್ನು ರಾಜ್ಯ ಔಷಧ ನಿಯಂತ್ರಣ ಇಲಾಖೆ ಪತ್ತೆಹಚ್ಚಿದೆ. ನಿಯಮ ಉಲ್ಲಂಘಿಸಿ ಬ್ರ್ಯಾಂಡೆಡ್ ಔಷಧ ಮಾರುತ್ತಿದ್ದ ರಾಜ್ಯದ 133 ಜನೌಷಧಿ ಕೇಂದ್ರಗಳಿಗೆ ಸರ್ಕಾರ ಇದೀಗ ಶೋಕಾಸ್ ನೋಟಿಸ್ (Show Cause Notice) ಜಾರಿ ಮಾಡಿದೆ.
ಕಳೆದ ಎರಡು ದಿನಗಳಲ್ಲಿ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ನಡೆಸಿದ್ದು, ಒಟ್ಟು 172 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ಪೈಕಿ ಬರೋಬ್ಬರಿ 133 ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಬ್ರ್ಯಾಂಡೆಡ್ ಔಷಧಗಳನ್ನು ಮಾರಾಟ ಮಾಡುತ್ತಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ.
ಸದ್ಯ ರಾಜ್ಯದಲ್ಲಿ 1,200ಕ್ಕೂ ಹೆಚ್ಚು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಕಾರ್ಯಾಚರಣೆ ನಡೆಸುತ್ತಿವೆ. ನೋಟಿಸ್ ಪಡೆದಿರುವ 133 ಕೇಂದ್ರಗಳ ಮಾಲೀಕರು ನಿಗದಿತ ಅವಧಿಯೊಳಗೆ ಇಲಾಖೆಗೆ ಸ್ಪಷ್ಟನೆ ನೀಡಬೇಕಾಗಿದೆ. “ಕೇಂದ್ರದ ನಿಯಮಗಳನ್ನು ಗಾಳಿಗೆ ತೂರಿ ಜನೌಷಧಿ ಕೇಂದ್ರಗಳಲ್ಲಿ ಯಾಕಾಗಿ ಬ್ರ್ಯಾಂಡೆಡ್ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ?” ಎಂದು ನೋಟಿಸ್ನಲ್ಲಿ ಪ್ರಶ್ನಿಸಲಾಗಿದ್ದು, ಸೂಕ್ತ ಉತ್ತರ ನೀಡದಿದ್ದರೆ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
ಮೊದಲ ಹಂತದಲ್ಲಿ 172 ಕೇಂದ್ರಗಳ ಮೇಲೆ ದಾಳಿ ನಡೆಸಿರುವ ಇಲಾಖೆ, ಮುಂದಿನ ದಿನಗಳಲ್ಲಿ ರಾಜ್ಯದ ಉಳಿದ ಎಲ್ಲಾ ಜನೌಷಧಿ ಕೇಂದ್ರಗಳ ಮೇಲೆಯೂ ಹಂತಹಂತವಾಗಿ ತಪಾಸಣೆ ಮತ್ತು ಪರಿಶೀಲನೆ ನಡೆಸಲು ನಿರ್ಧರಿಸಿದೆ. ಈ ಮೂಲಕ ಸಾರ್ವಜನಿಕರಿಗೆ ಮೋಸವಾಗುವುದನ್ನು ತಡೆಯಲು ಇಲಾಖೆ ಮುಂದಾಗಿದೆ.

Leave a Reply