ಇ-20 (E20) ಪೆಟ್ರೋಲ್ ಬಳಸುವುದರಿಂದ ವಾಹನ ವಿಮಾ ಪಾಲಿಸಿಗಳ ಮಾನ್ಯತೆ ರದ್ದಾಗುತ್ತದೆ (Insurance invalidation) ಎಂಬ ಆತಂಕವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ದೂರ ಮಾಡಿದೆ. ವಾಹನಗಳಿಗೆ ಇ-20 ಇಂಧನ ಬಳಸುವುದು ಮತ್ತು ವಿಮೆ ರದ್ದತಿಗೂ ಯಾವುದೇ ಸಂಬಂಧವಿಲ್ಲ, ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ತೈಲ ಸಚಿವಾಲಯವು ಸ್ಪಷ್ಟಪಡಿಸಿದೆ. ಭಾರತದ ಎಥೆನಾಲ್ ಮಿಶ್ರಣ ಕಾರ್ಯಕ್ರಮವು (Ethanol blending programme) ಸಂಪೂರ್ಣ ಸುರಕ್ಷಿತ, ಗ್ರಾಹಕ-ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ಪದ್ಧತಿ
ಎಥೆನಾಲ್ ಮಿಶ್ರಣವು ಕೇವಲ ಭಾರತಕ್ಕೆ ಸೀಮಿತವಾದದ್ದಲ್ಲ; ಇದೊಂದು ಜಾಗತಿಕವಾಗಿ ಒಪ್ಪಿತವಾದ ಅಭ್ಯಾಸವಾಗಿದೆ. ಅಮೆರಿಕ, ಬ್ರೆಜಿಲ್ ಮತ್ತು ಜಪಾನ್‌ನಂತಹ ಪ್ರಬಲ ರಾಷ್ಟ್ರಗಳಲ್ಲಿ ಎಥೆನಾಲ್ ಮಿಶ್ರಣವನ್ನು ಬಹಳ ಹಿಂದಿನಿಂದಲೂ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಬ್ರೆಜಿಲ್ ದೇಶವು ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವನ್ನು ಅಳವಡಿಸಿಕೊಂಡಿದ್ದು, ತನ್ನ ಸ್ಟ್ಯಾಂಡರ್ಡ್ ಪೆಟ್ರೋಲ್ ಮಿಶ್ರಣವಾಗಿ ‘ಇ-27’ (E27) ಅನ್ನು ಬಳಸುತ್ತಿದೆ ಎಂದು ಸಚಿವಾಲಯ ಉಲ್ಲೇಖಿಸಿದೆ.

ಆರ್ಥಿಕತೆ ಮತ್ತು ಪರಿಸರಕ್ಕೆ ಭಾರಿ ಲಾಭ
ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಮೂಲಕ ಕಚ್ಚಾ ತೈಲ ಆಮದು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿರುವ ಭಾರತವು, ಬರೋಬ್ಬರಿ 1.4 ಲಕ್ಷ ಕೋಟಿ ರೂಪಾಯಿಗೂ ಅಧಿಕ ವಿದೇಶಿ ವಿನಿಮಯವನ್ನು (Foreign exchange) ಉಳಿಸಿದೆ. ಎಥೆನಾಲ್ ಉತ್ಪಾದನೆಗೆ ಬಳಸುವ ಕೃಷಿ ಉತ್ಪನ್ನಗಳಿಗೆ ನಿರಂತರವಾಗಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಇದು ನೇರವಾಗಿ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ದೇಶದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ನೆರವಾಗಿದೆ.
ಜೈವಿಕ ಇಂಧನ ಬಳಕೆಗೆ ಮತ್ತಷ್ಟು ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ, ಭಾರತವು ವಾಹನ ಇಂಧನವಾಗಿ ಶುದ್ಧ ಎಥೆನಾಲ್ ‘ಇ-100’ (E100) ಬಳಕೆಗೆ ಇತ್ತೀಚೆಗಷ್ಟೇ ಅಧಿಕೃತ ಅನುಮೋದನೆ ನೀಡಿದೆ. ಕಾರ್ಬನ್ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ದೇಶವನ್ನು ಶುದ್ಧ ಚಲನಶೀಲತೆಯ (Cleaner mobility) ಕಡೆಗೆ ಕೊಂಡೊಯ್ಯಲು ಎಥೆನಾಲ್ ಮಿಶ್ರಣ ಕಾರ್ಯಕ್ರಮವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸುವಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ.
ವೈಜ್ಞಾನಿಕ ಪುರಾವೆಗಳು ಮತ್ತು ನಿರಂತರ ಪಾಲುದಾರರ ತೊಡಗಿಸಿಕೊಳ್ಳುವಿಕೆಯೊಂದಿಗೆ ಸುರಕ್ಷಿತ, ಪಾರದರ್ಶಕ ಮತ್ತು ಗ್ರಾಹಕ-ಕೇಂದ್ರಿತವಾಗಿ ಈ ಇಂಧನ ಕಾರ್ಯಕ್ರಮವನ್ನು ಜಾರಿಗೊಳಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ತೈಲ ಸಚಿವಾಲಯದ ಪ್ರಕಟಣೆ ಸ್ಪಷ್ಟಪಡಿಸಿದೆ.


Leave a Reply