ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಧರಿಸಿದ್ದ ಹುಲಿ ಉಗುರಿನ ಪ್ರಕರಣವು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ನಟ ಕಿಶನ್ ಬಿಳಗಲಿ ಹಾಗೂ ನಟಿ ನಿವೇದಿತಾ ಗೌಡ ಅವರು ನವಿಲುಗರಿ ಬಳಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನವಿಲು ಗರಿಗಳಿಂದ ಸಿದ್ಧಪಡಿಸಲಾದ ಉಡುಪುಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಂಚಿಕೊಂಡಿದ್ದ ಈ ಜೋಡಿಯ ವಿರುದ್ಧ ಇದೀಗ ಅರಣ್ಯ ಇಲಾಖೆಯಲ್ಲಿ ಅಧಿಕೃತ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಈ ದೂರು ನೀಡಿದ್ದು, ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ನಟ ಕಿಶನ್ ಹಾಗೂ ನಿವೇದಿತಾ ಗೌಡ ಅವರು ನಾಲ್ಕೈದು ದಿನಗಳ ಹಿಂದೆ ನವಿಲು ಗರಿಗಳಿರುವ ವಿಶೇಷ ಉಡುಪು ಧರಿಸಿ ರೀಲ್ಸ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ನೈಜ ನವಿಲು ಗರಿಗಳನ್ನು ಬಳಸಿ ಉಡುಪು ತಯಾರಿಸಿರುವುದು, ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವುದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ಅವರು ತಮ್ಮ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ವ್ಯಾಪ್ತಿಯ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ಅವರು ದೂರನ್ನು ಸಲ್ಲಿಸಿದ್ದಾರೆ.

ದೂರು ದಾಖಲಿಸಿಕೊಂಡು ತಕ್ಷಣವೇ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ. ತನಿಖೆಯ ಅವಧಿಯಲ್ಲಿ ಯಾವುದೇ ರಾಜಕೀಯ ಪ್ರಭಾವ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಪಾರದರ್ಶಕವಾಗಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿರುವ ಅವರು, ದೂರಿನಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ವೈರಲ್ ಆಗಿರುವ ವಿಡಿಯೋ ಹಾಗೂ ಛಾಯಾಚಿತ್ರಗಳ ತಾಂತ್ರಿಕ ಮತ್ತು ವೈಜ್ಞಾನಿಕ ಪರಿಶೀಲನೆ ನಡೆಸಬೇಕು ಹಾಗೂ ಉಡುಪಿನಲ್ಲಿ ಬಳಸಲಾದ ಗರಿಗಳು ನೈಜವಾಗಿವೆಯೇ ಅಥವಾ ಕೃತಕವಾಗಿವೆಯೇ ಎಂಬುದನ್ನು ದೃಢೀಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಂದು ವೇಳೆ ಅವು ನೈಜ ನವಿಲು ಗರಿಗಳಾಗಿರುವುದು ಕಂಡುಬಂದಲ್ಲಿ, ಕಿಶನ್ ಹಾಗೂ ನಿವೇದಿತಾ ಗೌಡ ಬಳಸಿರುವ ಉಡುಪುಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ, ಆ ನವಿಲು ಗರಿಗಳ ಮೂಲ, ಖರೀದಿ, ಸಾಗಣೆ ಹಾಗೂ ಸಂಗ್ರಹಣೆಯ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ. ಸಂಬಂಧಿತ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಈ ಗರಿಗಳನ್ನು ಪೂರೈಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನಲಾಗಿದೆ. ನವಿಲು ಗರಿಗಳನ್ನು ಪಡೆಯುವ ಉದ್ದೇಶದಿಂದ ಯಾವುದಾದರೂ ಅಕ್ರಮ ಬೇಟೆ, ಕಳ್ಳಸಾಗಣೆ ಅಥವಾ ವನ್ಯಜೀವಿ ಅಪರಾಧ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಲು ವಿಶೇಷ ತನಿಖೆ ನಡೆಸಬೇಕು ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.


Leave a Reply