ಬೆಂಗಳೂರು: ಜೂನ್ 21, 2026 ರಂದು ಬೆಂಗಳೂರಿನಲ್ಲಿ ನಡೆದ ನೀಟ್ (NEET) ಮರುಪರೀಕ್ಷೆಗೆ ಅಭ್ಯರ್ಥಿಯೊಬ್ಬರು ವಿಳಂಬವಾಗಿ ಬಂದು ಪರೀಕ್ಷೆ ತಪ್ಪಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ, ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಟ್ರಾಫಿಕ್ ಜಾಮ್ ಕಾರಣ ಎಂಬ ಆರೋಪಗಳನ್ನು ಬೆಂಗಳೂರು ಸಂಚಾರ ಪೊಲೀಸರು (BTP) ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ಸಮಗ್ರ ಸಿಸಿಟಿವಿ ಹಾಗೂ ಮಾರ್ಗ ವಿಶ್ಲೇಷಣೆ ನಡೆಸಿರುವ ಪೊಲೀಸರು, ವಿದ್ಯಾರ್ಥಿಯ ವಿಳಂಬವೇ ಪರೀಕ್ಷೆ ಮಿಸ್ ಆಗಲು ಕಾರಣ ಎಂದು ಫ್ಯಾಕ್ಟ್-ಚೆಕ್ (Fact-check) ಮೂಲಕ ಸ್ಪಷ್ಟಪಡಿಸಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಮಧ್ಯಾಹ್ನ 1:30 ಕೊನೆಯ ಸಮಯವಾಗಿತ್ತು (Cutoff time). ಆದರೆ, ಸದರಿ ಅಭ್ಯರ್ಥಿಯು ಮಧ್ಯಾಹ್ನ 1:33 ಕ್ಕೆ ಕೇಂದ್ರವನ್ನು ತಲುಪಿದ್ದರಿಂದ ನಿಯಮಾವಳಿಗಳ ಪ್ರಕಾರ ಪ್ರವೇಶ ನಿರಾಕರಿಸಲಾಗಿತ್ತು. ಈ ವಿಳಂಬಕ್ಕೆ ಅರಮನೆ ಮೈದಾನದಲ್ಲಿ (Palace Grounds) ನಡೆಯುತ್ತಿದ್ದ ಬೃಹತ್ ಕಾಂಗ್ರೆಸ್ ಕಾರ್ಯಕ್ರಮದಿಂದ ಉಂಟಾದ ಟ್ರಾಫಿಕ್ ಜಾಮ್ ಕಾರಣ ಎಂದು ಪೋಷಕರು ಹಾಗೂ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇದು ಭಾರಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಆದರೆ, ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಸ್ಪಷ್ಟನೆ ನೀಡಿರುವ ಟ್ರಾಫಿಕ್ ಪೊಲೀಸರು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
ಸಂಚಾರ ಪೊಲೀಸರ ತನಿಖೆಯ ಪ್ರಕಾರ, ಅಭ್ಯರ್ಥಿಯು ಮಧ್ಯಾಹ್ನ 1:30 ರ ಗಡುವಿನ ಪರೀಕ್ಷೆಗೆ ಕೇವಲ ಅರ್ಧ ಗಂಟೆ ಮುಂಚಿತವಾಗಿ, ಅಂದರೆ ಮಧ್ಯಾಹ್ನ 12:57 ಕ್ಕೆ ಆರ್‌ಟಿ ನಗರದ (RT Nagar) ತಮ್ಮ ನಿವಾಸದಿಂದ ಹೊರಟಿದ್ದಾರೆ. ಅಲ್ಲದೆ, ಪರೀಕ್ಷಾ ಕೇಂದ್ರ ತಲುಪಲು ದೂರದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ಆ ಮಾರ್ಗದಲ್ಲಿ ಯಾವುದೇ ರೀತಿಯ ಅಸಹಜ ಟ್ರಾಫಿಕ್ ಜಾಮ್ ಅಥವಾ ಜನದಟ್ಟಣೆಯ ದಟ್ಟಣೆ ಕಂಡುಬಂದಿಲ್ಲ. ವಾಹನ ಸಂಚಾರವು ಸಂಪೂರ್ಣವಾಗಿ ಸಹಜ ಸ್ಥಿತಿಯಲ್ಲಿತ್ತು ಮತ್ತು ಅಗತ್ಯವಿದ್ದ ಕಡೆಗಳಲ್ಲಿ ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದು ಬಿಟಿಪಿ ಸ್ಪಷ್ಟಪಡಿಸಿದೆ.
“ನಿಗದಿತ ಸಮಯ ಮುಗಿದ ನಂತರವೇ ನೀಟ್ ಅಭ್ಯರ್ಥಿ ಪರೀಕ್ಷಾ ಕೇಂದ್ರ ತಲುಪಿರುವುದು ಸಿಸಿಟಿವಿ ವಿಶ್ಲೇಷಣೆ ಮತ್ತು ಮಾರ್ಗ ಪರಿಶೀಲನೆಯಿಂದ ದೃಢಪಟ್ಟಿದೆ. ಸಂಚಾರ ಪರಿಸ್ಥಿತಿ ಸಾಮಾನ್ಯವಾಗಿತ್ತು. ಮನೆಯಿಂದ ತಡವಾಗಿ ಹೊರಟದ್ದು ಮತ್ತು ಉದ್ದದ ಮಾರ್ಗವನ್ನು ಆಯ್ಕೆ ಮಾಡಿಕೊಂಡದ್ದೇ ಈ ವಿಳಂಬಕ್ಕೆ ಪ್ರಮುಖ ಕಾರಣ” ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸ್ಪಷ್ಟನೆಯೊಂದಿಗೆ, ನೀಟ್ ಪರೀಕ್ಷಾ ದಿನದಂದು ನಗರದಲ್ಲಿ ಕಾಂಗ್ರೆಸ್ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂಬ ಆರೋಪಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ.

Leave a Reply