ಬೆಂಗಳೂರು: ಸ್ವಂತ ಮನೆ ನಿರ್ಮಿಸಿಕೊಳ್ಳುತ್ತಿರುವ ರಾಜ್ಯದ ಜನತೆಗೆ ಸರ್ಕಾರ ಭರ್ಜರಿ ಬಿಗ್ ರಿಲೀಫ್ ನೀಡಿದೆ. ವಾಸಯೋಗ್ಯ ಪ್ರಮಾಣ ಪತ್ರ (Occupancy Certificate – OC) ಇಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಸಿಗದೆ ಪರದಾಡುತ್ತಿದ್ದ ಲಕ್ಷಾಂತರ ಮನೆ ಮಾಲೀಕರಿಗೆ ಇಂಧನ ಇಲಾಖೆ ದೊಡ್ಡ ವಿನಾಯಿತಿ ಘೋಷಿಸಿದೆ. ಇನ್ಮುಂದೆ 2,400 ಚದರ ಅಡಿವರೆಗಿನ ವಿಸ್ತೀರ್ಣದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಓಸಿ (OC) ಕಡ್ಡಾಯವಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಕಟ್ಟಡಗಳಿಗೆ ಓಸಿ ಕಡ್ಡಾಯಗೊಳಿಸಿದ್ದರಿಂದಾಗಿ ರಾಜ್ಯಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ಕಟ್ಟಡಗಳಿಗೆ ವಿದ್ಯುತ್ ಸೌಲಭ್ಯ ಸಿಗದೆ ನೆನಗುದಿಗೆ ಬಿದ್ದಿದ್ದವು. ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು ಮತ್ತು ವಿನಾಯಿತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು. ಸಾರ್ವಜನಿಕರ ಈ ಸಮಸ್ಯೆಗೆ ಸ್ಪಂದಿಸಿರುವ ಉಪಮುಖ್ಯಮಂತ್ರಿ ಹಾಗೂ ಇಂಧನ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಈ ಬಂಪರ್ ಆದೇಶ ಹೊರಡಿಸುವ ಮೂಲಕ ಜನಸಾಮಾನ್ಯರ ಹಾಗೂ ಅಕ್ರಮ ಸೈಟ್ಗಳಲ್ಲಿ ಮನೆ ಕಟ್ಟಿಕೊಂಡವರ ಸಂಕಷ್ಟಕ್ಕೆ ಮುಕ್ತಿ ನೀಡಿದ್ದಾರೆ. ಬೆಸ್ಕಾಂ (BESCOM) ಸೇರಿದಂತೆ ರಾಜ್ಯದ ಎಲ್ಲಾ ಎಸ್ಕಾಂಗಳಲ್ಲಿ ಈ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಬಾಕಿ ಇರುವ ಕಟ್ಟಡಗಳ ಮಾಲೀಕರು ವಿದ್ಯುತ್ ಸಂಪರ್ಕಕ್ಕಾಗಿ 15 ದಿನದೊಳಗೆ ಅರ್ಜಿ ಸಲ್ಲಿಸಲು ಇಂಧನ ಇಲಾಖೆ ಅವಕಾಶ ಕಲ್ಪಿಸಿದೆ.

Leave a Reply