ಬೆಂಗಳೂರಿನ ಶಾಲಾ ಆವರಣದಲ್ಲಿ Swiggy, Zomato ಬ್ಯಾನ್: ಮಕ್ಕಳಿಗೆ ಕಟ್ಟುನಿಟ್ಟಿನ ನಿಯಮ!

ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳು ಇದೀಗ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಆಪ್‌ಗಳಾದ ಸ್ವಿಗ್ಗಿ, ಜೊಮ್ಯಾಟೊ (Zomato) ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತಿವೆ. ನಗರದ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆಯು ಇತ್ತೀಚೆಗಷ್ಟೇ ತನ್ನ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ಕಟ್ಟುನಿಟ್ಟಿನ ನಿಯಮವನ್ನು ಪ್ರಕಟಿಸಿದೆ. ಇದರ ಬೆನ್ನಲ್ಲೇ ನಗರದ ಇನ್ನೂ ಹಲವು ಪ್ರಮುಖ ಶಾಲೆಗಳು ಇದೇ ಹಾದಿ ಹಿಡಿದಿದ್ದು, ಕ್ಯಾಂಪಸ್ ಒಳಗೆ ಆನ್‌ಲೈನ್ ಫುಡ್ ಡೆಲಿವರಿಗೆ ಬ್ರೇಕ್ ಹಾಕುತ್ತಿವೆ.

ಶಾಲಾ ಆವರಣದಲ್ಲಿ ಈ ರೀತಿಯ ನಿಷೇಧ ಹೇರಲು ಪ್ರಮುಖ ಕಾರಣ ಮಕ್ಕಳ ಆರೋಗ್ಯ. ಶಾಲಾ ಆಡಳಿತ ಮಂಡಳಿಗಳು ಹೇಳುವಂತೆ, ಹೊರಗಿನಿಂದ ಆರ್ಡರ್ ಮಾಡುವ ಬಹುತೇಕ ಜಂಕ್ ಫುಡ್‌ಗಳು ಆರೋಗ್ಯಕರವಾಗಿರುವುದಿಲ್ಲ. ಅವುಗಳಲ್ಲಿ ಅತಿಯಾದ ಎಣ್ಣೆ, ಉಪ್ಪು ಮತ್ತು ಪ್ರಿಸರ್ವೇಟಿವ್ಸ್‌ಗಳನ್ನು ಬಳಸಲಾಗಿರುತ್ತದೆ. ಇದು ಮಕ್ಕಳ ಭವಿಷ್ಯದ ಆರೋಗ್ಯದ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ, ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಮನೆಯಿಂದ ತಂದ ಸಾಮಾನ್ಯ ಪಲಾವ್ ತಿನ್ನುವಾಗ, ಪಕ್ಕದ ಮಗು ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ ತಿಂದರೆ ಅದು ಮಕ್ಕಳ ಮನಸ್ಸಿನಲ್ಲಿ ಅನಗತ್ಯ ಆಕರ್ಷಣೆ ಮತ್ತು ಕೀಳರಿಮೆಯಂತಹ ತಾರತಮ್ಯವನ್ನು ಮೂಡಿಸುತ್ತದೆ. ಇದು ಪರೋಕ್ಷವಾಗಿ ಪೋಷಕರ ಮೇಲೂ ಮತ್ತಷ್ಟು ಆರ್ಥಿಕ ಹಾಗೂ ಮಾನಸಿಕ ಒತ್ತಡವನ್ನು ತರುತ್ತದೆ ಎಂದು ಶಾಲೆಯೊಂದರ ಪ್ರಾಂಶುಪಾಲರು ಕಳವಳ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಆರೋಗ್ಯದ ಜೊತೆಗೆ ಶಾಲಾ ಆವರಣದ ಭದ್ರತೆಯೂ ಈ ನಿರ್ಧಾರದ ಹಿಂದಿರುವ ಪ್ರಮುಖ ಅಂಶವಾಗಿದೆ. ಆನ್‌ಲೈನ್ ಆರ್ಡರ್ ನೆಪದಲ್ಲಿ ಅಪರಿಚಿತ ಡೆಲಿವರಿ ಬಾಯ್‌ಗಳು ಪದೇ ಪದೇ ಶಾಲಾ ಆವರಣಕ್ಕೆ ಪ್ರವೇಶಿಸುವುದು ಭದ್ರತೆಯ ದೃಷ್ಟಿಯಿಂದ ಕಿರಿಕಿರಿಯ ಹಾಗೂ ಅಪಾಯಕಾರಿ ಸಂಗತಿಯಾಗಿದೆ. ಪ್ರತಿದಿನ 4 ರಿಂದ 5 ಪಾರ್ಸಲ್‌ಗಳನ್ನು ತರಗತಿಗಳಿಗೆ ತಲುಪಿಸುವ ಪ್ರಕ್ರಿಯೆಯು ಶಾಲೆಯ ಶಿಸ್ತು ಮತ್ತು ಸಮಯ ಪಾಲನೆಗೆ ತೀವ್ರ ಅಡ್ಡಿಪಡಿಸುತ್ತದೆ ಎಂದು ಆಡಳಿತ ಮಂಡಳಿಗಳು ಸ್ಪಷ್ಟಪಡಿಸಿವೆ.

ಶಾಲೆಗಳು ಮಕ್ಕಳಲ್ಲಿ ಮನೆಯ ಊಟಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಪೋಷಕರಿಗೆ ಕಿವಿಮಾತು ಹೇಳಿವೆ. ಒಂದು ವೇಳೆ ಪೋಷಕರಿಗೆ ಅನಿವಾರ್ಯ ಕಾರಣಗಳಿಂದ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ, ಹೋಟೆಲ್‌ನಿಂದ ತರಿಸಿದ ಆರೋಗ್ಯಕರ ಆಹಾರವನ್ನೇ ಆದರೂ ಸಾಮಾನ್ಯ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಕಳುಹಿಸಬೇಕು ಎಂದು ಶಾಲೆಗಳು ವಿನಂತಿಸಿವೆ. ವಿಶೇಷವೆಂದರೆ, ವಿದ್ಯಾರ್ಥಿಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೂ ಸಹ ಶಾಲಾ ವೇಳೆಯಲ್ಲಿ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Leave a Reply

Your email address will not be published. Required fields are marked *