ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವ ‘ಟಾಕ್ಸಿಕ್’ ಚಿತ್ರದಿಂದ ಭರ್ಜರಿ ಅಪ್ಡೇಟ್ ಹೊರಬಿದ್ದಿದೆ. ಕೆಜಿಎಫ್ 2 ಬಳಿಕ ಯಶ್ ನಟಿಸುತ್ತಿರುವ ಈ ಬೃಹತ್ ಕ್ಯಾನ್ವಾಸ್ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಹೊಸ ರಿಲೀಸ್ ದಿನಾಂಕವನ್ನು ಘೋಷಿಸುವ ಮೂಲಕ ಸಿಹಿಸುದ್ದಿ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಟಾಕ್ಸಿಕ್ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ತಾಂತ್ರಿಕ ಹಾಗೂ ಇತರ ಕಾರಣಗಳಿಂದ ಎರಡು ಬಾರಿ ಮುಂದೂಡಿಕೆಯಾಗಿದ್ದ ಚಿತ್ರವು, ಇದೀಗ ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ.
‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರವು ಅದ್ಭುತ ಪೀರಿಯಡ್ ಆಕ್ಷನ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅವರೊಂದಿಗೆ ಯಶ್ ಕೂಡ ಚಿತ್ರಕ್ಕೆ ಕಥೆ ಬರೆದಿರುವುದು ವಿಶೇಷ. ಯಶ್ ಅವರಿಗೆ ನಾಯಕಿಯರಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ, ಲೇಡಿ ಸೂಪರ್ ಸ್ಟಾರ್ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಹಾಗೂ ಅಮಿತ್ ತಿವಾರಿ ಸೇರಿದಂತೆ ಘಟಾನುಘಟಿ ತಾರಾಗಣವೇ ಚಿತ್ರದಲ್ಲಿದೆ.

ಚಿತ್ರದ ತಾಂತ್ರಿಕ ವರ್ಗವೂ ಅತ್ಯಂತ ಶ್ರೀಮಂತವಾಗಿದ್ದು, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಅವರೇ ಈ ಚಿತ್ರಕ್ಕೂ ಸಂಗೀತ ಮತ್ತು ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಹಲವಾರು ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದರೆ, ಭಾರತದ ಖ್ಯಾತ ಸಾಹಸ ನಿರ್ದೇಶಕರಾದ ಅನ್ಬರಿವ್ ಜೋಡಿಯು ಆಯ್ದ ಭಾಗಗಳಿಗೆ ನೃತ್ಯ ಹಾಗೂ ಸಾಹಸ ಸಂಯೋಜನೆ ಮಾಡಿದೆ. ವಿಶೇಷವೆಂದರೆ, ವಿಶ್ವಾದ್ಯಂತ ಭಾರೀ ಹೈಪ್ ಕ್ರಿಯೇಟ್ ಮಾಡಿರುವ ಈ ಟಾಕ್ಸಿಕ್ ಚಿತ್ರವನ್ನು ಕೇವಲ ಪ್ಯಾನ್ ಇಂಡಿಯಾ ಮಾತ್ರವಲ್ಲದೆ, ನೇರವಾಗಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಗ್ಲಿಂಪ್ಸ್ ವಿಡಿಯೋ ಸಾಕಷ್ಟು ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದ್ದರೂ, ಅಭಿಮಾನಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದ್ದು, ಆಗಸ್ಟ್ 26 ರಂದು ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಲು ಯಶ್ ಅಂಡ್ ಟೀಮ್ ಸಜ್ಜಾಗಿದೆ.


Leave a Reply