ODI | ಸೂರ್ಯವಂಶಿ ಸಿಡಿಲಬ್ಬರ: ಕೇವಲ 11 ಎಸೆತಗಳಲ್ಲಿ ಅರ್ಧಶತಕ, ABD ವಿಶ್ವದಾಖಲೆ ಉಡೀಸ್!

ಹಂಚಿಕೊಳ್ಳಿ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಈ ಮಹತ್ತರ ಸಾಧನೆ ಮಾಡಿದ್ದಾರೆ. ಈ ಸ್ಫೋಟಕ ಬ್ಯಾಟಿಂಗ್ ಮೂಲಕ ಲಿಸ್ಟ್ ಎ (ಏಕದಿನ) ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡು ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ದಾರೆ.

ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಚ್ಚಿಗೆ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ, ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಆರಂಭವನ್ನು ಒದಗಿಸಿದರು. ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಶ್ರೀಲಂಕಾ ಬೌಲರ್​ಗಳನ್ನು ನಿರ್ದಯವಾಗಿ ದಂಡಿಸಿದರು. ಪರಿಣಾಮವಾಗಿ ಅವರು ಎದುರಿಸಿದ ಮೊದಲ 11 ಎಸೆತಗಳಲ್ಲಿಯೇ 5 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳು ಮೂಡಿಬಂದವು. ಈ ಮೂಲಕ ಶ್ರೀಲಂಕಾದ ಕೌಶಲ್ಯ ವೀರರತ್ನೆ ಅವರು 2005 ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ದೇಶೀಯ ಲಿಸ್ಟ್ ಎ ಪಂದ್ಯದಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ನಿರ್ಮಿಸಿದ್ದ ಅಜೇಯ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಈ ಭರ್ಜರಿ ಬ್ಯಾಟಿಂಗ್ ಮೂಲಕ ವೈಭವ್ ಅವರು ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರ ಅತಿ ವೇಗದ ದಾಖಲೆಯನ್ನೂ ಉಡೀಸ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ವಿಶ್ವ ದಾಖಲೆ ಈ ಹಿಂದೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು. ಅವರು 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇತ್ತೀಚೆಗಷ್ಟೇ 2025 ರಲ್ಲಿ ಐರ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್​ನ ಮ್ಯಾಥ್ಯೂ ಫೋರ್ಡ್ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಎಬಿಡಿ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಈ ಇಬ್ಬರು ದಿಗ್ಗಜರ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ಹಿಂದಿಕ್ಕಿದ್ದಾರೆ. 

ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ್ ಎ ನಡುವಣ ಟೂರ್ನಿಯು ಅಂತಾರಾಷ್ಟ್ರೀಯ ಪಂದ್ಯಾವಳಿಯಾಗಿದ್ದು, ಈ ಮೂಲಕ ದ್ವಿರಾಷ್ಟ್ರೀಯ ಅಥವಾ ಬಹುರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆ ಕೂಡ ವೈಭವ್ ಪಾಲಾಗಿದೆ. ಇವರ ಈ ಸಿಡಿಲಬ್ಬರದ ಬ್ಯಾಟಿಂಗ್​ ನೆರವಿನೊಂದಿಗೆ ಟೀಮ್ ಇಂಡಿಯಾ ಕೇವಲ 7 ಓವರ್​ಗಳ ಮುಕ್ತಾಯದ ವೇಳೆಗೆ 116 ರನ್​ ಕಲೆಹಾಕಿ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ.

Leave a Reply

Your email address will not be published. Required fields are marked *

Advertisement


This will close in 3 seconds