ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಆವರಣದಲ್ಲಿ ಕ್ಯಾಬ್ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ವಂಚಕರು ಹೊಸ ತಂತ್ರವೊಂದನ್ನು ಹೆಣೆದಿದ್ದಾರೆ. ಓಲಾ, ಉಬರ್ ಮತ್ತು ರ್ಯಾಪಿಡೋದಂತಹ (Ola, Uber, Rapido) ಪ್ರಮುಖ ರೈಡ್ ಬುಕಿಂಗ್ ಆ್ಯಪ್ಗಳನ್ನೇ ಹೋಲುವ ‘ನಕಲಿ ಮೊಬೈಲ್ ಆ್ಯಪ್’ಗಳನ್ನು ಬಳಸುತ್ತಿರುವ ಕೆಲವು ಖದೀಮ ಚಾಲಕರು, ಪ್ರಯಾಣದ ಕೊನೆಯಲ್ಲಿ ಗ್ರಾಹಕರಿಗೆ ದುಪ್ಪಟ್ಟು ದರದ ಬಿಲ್ ತೋರಿಸಿ ಸುಲಿಗೆ ಮಾಡುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
400 ರಿಂದ 700 ರೂ.ವರೆಗೆ ಹೆಚ್ಚುವರಿ ವಸೂಲಿ!
‘ಡೆಕ್ಕನ್ ಹೆರಾಲ್ಡ್’ ವರದಿಯ ಪ್ರಕಾರ, ಇತ್ತೀಚೆಗೆ ವಿಮಾನ ನಿಲ್ದಾಣದಿಂದ ಮಲ್ಲೇಶ್ವರಂಗೆ ರ್ಯಾಪಿಡೋ ಮೂಲಕ ಪ್ರಯಾಣಿಸಿದ ಪ್ರತೀಕ್ ಎನ್ (38) ಎಂಬುವವರು ಈ ವಂಚನೆಗೆ ಬಲಿಯಾಗಿದ್ದಾರೆ. ಅವರ ಮೊಬೈಲ್ ಆ್ಯಪ್ನಲ್ಲಿ 720 ರೂ. ದರ ತೋರಿಸಿದ್ದರೆ, ಚಾಲಕನ ಫೋನ್ನಲ್ಲಿದ್ದ ನಕಲಿ ಆ್ಯಪ್ನಲ್ಲಿ ಬರೋಬ್ಬರಿ 1,110 ರೂ. ಬಿಲ್ ತೋರಿಸಿತ್ತು. ಏರ್ಪೋರ್ಟ್ ಪಾರ್ಕಿಂಗ್ ಶುಲ್ಕ ಹೆಚ್ಚಳ ಹಾಗೂ ಟ್ರಾಫಿಕ್ ನೆಪ ಹೇಳಿ ಚಾಲಕ ಹೆಚ್ಚುವರಿ ಹಣ ಪೀಕಿದ್ದಾನೆ.

ಅದೇ ರೀತಿ, ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದ ಮತ್ತೊಬ್ಬ ಪ್ರಯಾಣಿಕನಿಗೆ 1,330 ರೂ. ಬದಲಾಗಿ 2,000 ರೂಪಾಯಿಗೂ ಅಧಿಕ ಬಿಲ್ ತೋರಿಸಿ ವಂಚಿಸಲು ಯತ್ನಿಸಲಾಗಿದೆ.
ವಂಚನೆ ಜಾಲದ ಅಸಲಿ ತಂತ್ರ ಏನು?
ಈ ನಕಲಿ ಆ್ಯಪ್ಗಳ ದೋಖಾ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ. ನಾರಾಯಣಸ್ವಾಮಿ ವಿವರಿಸಿದ್ದಾರೆ. ಚಾಲಕರು ಮೊದಲು ಅಧಿಕೃತ ಆ್ಯಪ್ನಲ್ಲಿ ರೈಡ್ ಬುಕ್ ಮಾಡಿಕೊಂಡು, ಗ್ರಾಹಕರಿಂದ ಒಟಿಪಿ (OTP) ಪಡೆದು ರೈಡ್ ಸ್ಟಾರ್ಟ್ ಮಾಡುತ್ತಾರೆ. ಅದೇ ಸಮಯದಲ್ಲಿ ತಮ್ಮ ಫೋನ್ನಲ್ಲಿರುವ, ಅಸಲಿ ಉಬರ್ ಅಥವಾ ರ್ಯಾಪಿಡೋದಂತೆಯೇ ವಿನ್ಯಾಸಗೊಂಡಿರುವ ಮತ್ತೊಂದು ನಕಲಿ ಆ್ಯಪ್ ಅನ್ನೂ ಬ್ಯಾಕ್ಗ್ರೌಂಡ್ನಲ್ಲಿ ರನ್ ಮಾಡುತ್ತಾರೆ.
ಇನ್ನು ಕೆಲವರು ಮೊದಲೇ ಎಡಿಟ್ ಮಾಡಿಟ್ಟುಕೊಂಡ ಹೆಚ್ಚಿನ ದರದ ನಕಲಿ ಸ್ಕ್ರೀನ್ಶಾಟ್ಗಳನ್ನು ತೋರಿಸಿ ಜನರನ್ನು ಯಾಮಾರಿಸುತ್ತಾರೆ. ಈ ಬಗ್ಗೆ ಯೂನಿಯನ್ ವತಿಯಿಂದಲೇ ಚಾಲಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅನುಮಾನ ಬಂದರೆ ಪ್ರಯಾಣಿಕರು ಏನು ಮಾಡಬೇಕು?
ಈ ಕುರಿತು ಪ್ರತಿಕ್ರಿಯಿಸಿರುವ ಅಗ್ರಿಗೇಟರ್ ಸಂಸ್ಥೆಗಳು ಪ್ರಯಾಣಿಕರಿಗೆ ಕೆಲವು ಎಚ್ಚರಿಕೆ ಹಾಗೂ ಪರಿಹಾರದ ಭರವಸೆಗಳನ್ನು ನೀಡಿವೆ. ಇಂತಹ ದೂರುಗಳು ಕೇವಲ ವಿಮಾನ ನಿಲ್ದಾಣಕ್ಕೆ ಮಾತ್ರ ಸೀಮಿತವಾಗಿಲ್ಲ. ದೂರು ಬಂದ ತಕ್ಷಣ ತನಿಖೆ ನಡೆಸಿ ಗ್ರಾಹಕರಿಗೆ ಹಣ ಮರುಪಾವತಿ ಮಾಡಲಾಗುತ್ತಿದೆ. ವಂಚಕ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಗ್ರಾಹಕರು ತಮ್ಮದೇ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸುವ ದರವನ್ನು ಮಾತ್ರ ಪಾವತಿಸಬೇಕು.
ದರ ವ್ಯತ್ಯಾಸಗಳು ಕಂಡುಬಂದಲ್ಲಿ ಪ್ರಯಾಣಿಕರು ತಕ್ಷಣವೇ ಅಪ್ಲಿಕೇಶನ್ನಲ್ಲಿರುವ 24×7 ಹೆಲ್ಪ್ಲೈನ್ ಮೂಲಕ ಸಂಪರ್ಕಿಸಬಹುದು, ಕೇವಲ 30 ಸೆಕೆಂಡುಗಳಲ್ಲಿ ಸಂಸ್ಥೆಯಿಂದ ನೆರವು ಲಭ್ಯವಾಗಲಿದೆ. ಸಾರ್ವಜನಿಕರು ವಿಮಾನ ನಿಲ್ದಾಣದಲ್ಲಿ ಕೇವಲ ಅಧಿಕೃತ 8 ಕ್ಯಾಬ್ ಪಾಲುದಾರರ ಸೇವೆಗಳನ್ನು ಮಾತ್ರ ಬಳಸುವಂತೆ ಏರ್ಪೋರ್ಟ್ ಆಪರೇಟರ್ (BIAL) ಕೋರಿದೆ.


Leave a Reply