ಜೂನ್ 21 ರಂದು ನಡೆಯಲಿರುವ ನೀಟ್-ಯುಜಿ (NEET-UG) ಮರುಪರೀಕ್ಷೆಗೂ ಮುನ್ನ ‘ಟೆಲಿಗ್ರಾಂ’ (Telegram) ಮೆಸೇಜಿಂಗ್ ಆ್ಯಪ್ ಮೇಲೆ ಕೇಂದ್ರ ಸರ್ಕಾರ ವಿಧಿಸಿದ್ದ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಈ ವೇದಿಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಕೇಂದ್ರ ಸರ್ಕಾರವು ಸಾಕಷ್ಟು ಮತ್ತು ಸೂಕ್ತ ಕಾರಣಗಳನ್ನು ಒದಗಿಸಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಜೂನ್ 21 ರ ಮರುಪರೀಕ್ಷೆಗೂ ಮುನ್ನ ಕೇಂದ್ರದ ನಿರ್ಬಂಧವನ್ನು ಪ್ರಶ್ನಿಸಿ ಬುಧವಾರ ಹೈಕೋರ್ಟ್ ಮೆಟ್ಟಿಲೇರಿದ್ದ ಟೆಲಿಗ್ರಾಂ ಸಂಸ್ಥೆಗೆ ಭಾರಿ ಹಿನ್ನಡೆಯಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಸರ್ಕಾರದ ಕ್ರಮ ಸಮರ್ಥನೀಯ
ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಸರ್ಕಾರದ ಆದೇಶವು ಸಂಬಂಧಿತ ಮತ್ತು ನಿಖರವಾದ ಮಾಹಿತಿಯನ್ನು ಆಧರಿಸಿದೆ. ಟೆಲಿಗ್ರಾಂ ಸಂಸ್ಥೆಯು ತನ್ನ ಅರ್ಜಿಯಲ್ಲಿ ಆರೋಪಿಸಿರುವಂತೆ ಇದು ಸರ್ಕಾರದ ಅವಸರದ ಅಥವಾ ವಿವೇಚನಾರಹಿತ ನಿರ್ಧಾರವಲ್ಲ ಎಂದು ನ್ಯಾಯಪೀಠ ಉಲ್ಲೇಖಿಸಿದೆ. ಈ ವೇದಿಕೆಯಲ್ಲಿ ಸೃಷ್ಟಿಯಾಗುವ ಮತ್ತು ಹಂಚಿಕೆಯಾಗುವ ಕಂಟೆಂಟ್‌ಗಳು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 69A ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ಎತ್ತಿಹಿಡಿದಿದೆ. ಸರ್ಕಾರದ ಈ ನಿರ್ಬಂಧದ ಆದೇಶವು ಅತ್ಯಂತ ಕಡಿಮೆ ನಿರ್ಬಂಧಿತ (Least restrictive) ಕ್ರಮವಾಗಿದೆ ಮತ್ತು ಇದು ಅಸಮರ್ಪಕವಾಗಿಲ್ಲ (Not disproportionate) ಎಂದು ನ್ಯಾಯಮೂರ್ತಿ ಕಾರಿಯಾ ಅಭಿಪ್ರಾಯಪಟ್ಟಿದ್ದಾರೆ.

ಜೂನ್ 30ರವರೆಗೆ ಎಡಿಟ್ ಫೀಚರ್ ಕೂಡ ಸ್ಥಗಿತ
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಟೆಲಿಗ್ರಾಂ ವೇದಿಕೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಬೃಹತ್ ಹಗರಣದ ಜಾಲವನ್ನು ಬಯಲಿಗೆಳೆದ ನಂತರ, ಕೇಂದ್ರ ಸರ್ಕಾರವು ಜೂನ್ 22 ರವರೆಗೆ ಈ ಆ್ಯಪ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಈ ನಿರ್ಬಂಧದ ಆದೇಶದ ಜೊತೆಗೆ, ಭಾರತದಲ್ಲಿ ಜೂನ್ 30 ರವರೆಗೆ ಟೆಲಿಗ್ರಾಂನ ‘ಮೆಸೇಜ್ ಎಡಿಟಿಂಗ್’ ಫೀಚರ್ ಅನ್ನು ನಿಷ್ಕ್ರಿಯಗೊಳಿಸುವಂತೆ (Disable) ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಆ್ಯಪ್‌ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ ಎಂದು ಎನ್‌ಟಿಎ ನ್ಯಾಯಾಲಯಕ್ಕೆ ತಿಳಿಸಿದೆ. ಸಂದೇಶಗಳನ್ನು ಎಡಿಟ್ ಮಾಡುವಾಗ ಸಮಯ ಮತ್ತು ದಿನಾಂಕ ಬದಲಾಯಿಸಿ ತನಿಖೆಯ ಹಾದಿ ತಪ್ಪಿಸುವ ಸಾಧ್ಯತೆ ಇರುವುದರಿಂದ ಈ ಎಡಿಟಿಂಗ್ ಆಯ್ಕೆಯನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ.


Leave a Reply