ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಹೊರವಲಯದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Fatal Road Accident) ಕೊಳ್ಳೇಗಾಲ ನ್ಯಾಯಾಲಯದ ಶಿರಸ್ತೆದಾರ ಸೇರಿದಂತೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಸಿಬ್ಬಂದಿ ಸೇರಿದಂತೆ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಹೊರವಲಯದ ಮುಡಿಗುಂಡ ಸೇತುವೆ ಬಳಿ (Mudigunda Bridge) ಈ ದುರಂತ ಸಂಭವಿಸಿದೆ. ಮೃತರನ್ನು ಕೊಳ್ಳೇಗಾಲ ನ್ಯಾಯಾಲಯದ (Kollegala Court) ಶಿರಸ್ತೆದಾರ ನಂಜುಂಡಪ್ಪ ಹಾಗೂ ಕೋರ್ಟ್ ಸಿಬ್ಬಂದಿ ಯಮುನಪ್ಪ ಎಂದು ಗುರುತಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಕೃಷ್ಣಪ್ಪ, ಲೋಕೇಶ್ ಹಾಗೂ ಶಂಕರಪ್ಪ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ (Critically Injured) ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ (Kollegala Government Hospital) ಶವಗಾರಕ್ಕೆ ರವಾನಿಸಲಾಗಿದೆ. ಅಪಘಾತಕ್ಕೀಡಾದ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply