15 ವರ್ಷದೊಳಗಿನ ಮಕ್ಕಳಿಗೆ Social Media ಬ್ಯಾನ್: ಈ ನಿಯಮ ಜಾರಿಗೆ ತಂದ ಮೊದಲ ಅರಬ್ ರಾಷ್ಟ್ರ!

ಯುುನೈಟೆಡ್ ಅರಬ್ ಎಮಿರೇಟ್ಸ್ (UAE) 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ (Social Media) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ ಸೋಷಿಯಲ್ ಮೀಡಿಯಾ ಬಳಕೆಗೆ ಕನಿಷ್ಠ ವಯೋಮಿತಿಯನ್ನು ಕಟ್ಟುನಿಟ್ಟಾಗಿ ನಿಗದಿಪಡಿಸಿದ ಮೊದಲ ಅರಬ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಯುಎಇ ಪಾತ್ರವಾಗಿದೆ.

ಹೊಸ ನಿಯಮದ ಪ್ರಮುಖ ಅಂಶಗಳು

ಗುರುವಾರ ಸರ್ಕಾರ ಅಂಗೀಕರಿಸಿದ ಹೊಸ ನಿರ್ಣಯದ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವೈಯಕ್ತಿಕ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹೊಸದಾಗಿ ತೆರೆಯುವಂತಿಲ್ಲ ಹಾಗೂ ಬಳಸುವಂತಿಲ್ಲ. ಅಲ್ಲದೆ, ಈ ಸಾಮಾಜಿಕ ಜಾಲತಾಣಗಳ ಸಂಪೂರ್ಣ ಫೀಚರ್‌ಗಳನ್ನು ಬಳಸಲು ಸಹ ಅವರಿಗೆ ನಿರ್ಬಂಧ ವಿಧಿಸಲಾಗಿದೆ. ಮಕ್ಕಳ ಮಾನಸಿಕ ಆರೋಗ್ಯ, ಸೈಬರ್ ಭದ್ರತೆ ಮತ್ತು ಅತಿಯಾದ ಸ್ಕ್ರೀನ್ ಟೈಮ್ ಕುರಿತು ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಕಳವಳಗಳ ನಡುವೆ ಯುಎಇ ಈ ದಿಟ್ಟ ಹೆಜ್ಜೆ ಇಟ್ಟಿದೆ. ಮಕ್ಕಳು ಹಾನಿಕಾರಕ ಕಂಟೆಂಟ್, ಸೈಬರ್ ಬುಲ್ಲಿಂಗ್ ಮತ್ತು ಆನ್‌ಲೈನ್ ವ್ಯಸನಕ್ಕೆ ಸುಲಭವಾಗಿ ಬಲಿಯಾಗುತ್ತಿರುವುದನ್ನು ತಡೆಯಲು ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.

ಬ್ರಿಟನ್ ಮತ್ತು ಆಸ್ಟ್ರೇಲಿಯಾ ಹಾದಿಯಲ್ಲಿ ಯುಎಇ

ಯುಎಇ ಮಾತ್ರವಲ್ಲದೆ, ಯುನೈಟೆಡ್ ಕಿಂಗ್‌ಡಮ್ (UK), ಆಸ್ಟ್ರೇಲಿಯಾ ಮತ್ತು ಮಲೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಮಕ್ಕಳ ಸೋಷಿಯಲ್ ಮೀಡಿಯಾ ಬಳಕೆಯನ್ನು ನಿಯಂತ್ರಿಸಲು ಇದೇ ರೀತಿಯ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿವೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಇತ್ತೀಚೆಗಷ್ಟೇ 16 ವರ್ಷದೊಳಗಿನ ಮಕ್ಕಳಿಗೆ ಸ್ನ್ಯಾಪ್‌ಚಾಟ್, ಟಿಕ್‌ಟಾಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಎಕ್ಸ್ (X) ನಂತಹ ಪ್ರಮುಖ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಆದರೆ ಯೂಟ್ಯೂಬ್ ಕಿಡ್ಸ್, ವಾಟ್ಸಾಪ್ ಮತ್ತು ಸಿಗ್ನಲ್‌ನಂತಹ ಮೆಸೇಜಿಂಗ್ ಆ್ಯಪ್‌ಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಆನ್‌ಲೈನ್ ಜಗತ್ತಿನಲ್ಲಿ ಅಪ್ರಾಪ್ತರ ರಕ್ಷಣೆಯನ್ನು ಬಲಪಡಿಸುವ ಈ ಹೊಸ ನಿಯಮಗಳು ಮುಂದಿನ ವರ್ಷದ ಆರಂಭದಲ್ಲಿ ಬ್ರಿಟನ್‌ನಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ.

ಸೋಷಿಯಲ್ ಮೀಡಿಯಾ ಬಳಕೆಯಿಂದ ಮಕ್ಕಳು ಅತೃಪ್ತರಾಗುತ್ತಿರುವುದನ್ನು ಪ್ರತಿಯೊಬ್ಬ ಪೋಷಕರೂ ತಮ್ಮ ಕಣ್ಣಾರೆ ನೋಡುತ್ತಿದ್ದಾರೆ. ಆನ್‌ಲೈನ್ ಜಗತ್ತಿನಲ್ಲಿ ಮಕ್ಕಳಿಗೆ ಬಲವಾದ ರಕ್ಷಣೆ ಒದಗಿಸುವಂತೆ ಕುಟುಂಬಗಳು ನೇರವಾಗಿ ಮನವಿ ಮಾಡಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೊಸ ಕ್ರಮಗಳನ್ನು ಘೋಷಿಸುವಾಗ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದರು.

ಆಸ್ಟ್ರೇಲಿಯಾದ ಕಠಿಣ ಕಾನೂನಿನ ಮಾದರಿ

ಬ್ರಿಟನ್ ಮತ್ತು ಯುಎಇ ರಾಷ್ಟ್ರಗಳು ಇದೀಗ ಆಸ್ಟ್ರೇಲಿಯಾದ ಮಾದರಿಯನ್ನೇ ಅನುಸರಿಸಲು ಯೋಜಿಸಿವೆ. ಕಳೆದ ವರ್ಷ ಆಸ್ಟ್ರೇಲಿಯಾ 16 ವರ್ಷದೊಳಗಿನ ಮಕ್ಕಳು ಸೋಷಿಯಲ್ ಮೀಡಿಯಾ ಖಾತೆ ಹೊಂದುವುದನ್ನು ಕಡ್ಡಾಯವಾಗಿ ನಿಷೇಧಿಸಿದ ವಿಶ್ವದ ಮೊದಲ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಆಸ್ಟ್ರೇಲಿಯಾದ ಕಠಿಣ ಕಾನೂನಿನ ಅನ್ವಯ, ಅಪ್ರಾಪ್ತ ಬಳಕೆದಾರರು ತಮ್ಮ ಸೇವೆಗಳನ್ನು ಪ್ರವೇಶಿಸದಂತೆ ತಡೆಯಲು ವಿಫಲವಾಗುವ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಕೋಟ್ಯಂತರ ಡಾಲರ್ ದಂಡ ವಿಧಿಸುವ ಅವಕಾಶವಿದೆ. ಇದೇ ನಿಟ್ಟಿನಲ್ಲಿ ಇದೀಗ ಯುಎಇ ಕೂಡ ತನ್ನ ಅಪ್ರಾಪ್ತ ಪ್ರಜೆಗಳ ರಕ್ಷಣೆಗೆ ಮುಂದಾಗಿದೆ.

Leave a Reply

Your email address will not be published. Required fields are marked *