Chamarajnagar | ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಕೇವಲ 27 ದಿನಗಳಲ್ಲಿ 2.73 ಕೋಟಿ ರೂ. ಭರ್ಜರಿ ಸಂಗ್ರಹ!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಮತ್ತೆ ಕೋಟಿ ಕೋಟಿ ಹಣ ಸಂಗ್ರಹವಾಗಿದೆ. ವಾರಾಂತ್ಯದ ರಜೆಗಳು ಹಾಗೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಕ್ತರ ಹರಿವು ಹೆಚ್ಚಾಗಿದ್ದು, ಕೇವಲ 27 ದಿನಗಳಲ್ಲಿ ಬರೋಬ್ಬರಿ 2,73,57,105 ರೂಪಾಯಿ ನಗದು ಕಾಣಿಕೆ ರೂಪದಲ್ಲಿ ಜಮೆಯಾಗಿದೆ.

ಚಿನ್ನ, ಬೆಳ್ಳಿ ಹಾಗೂ ವಿದೇಶಿ ನೋಟುಗಳ ಅರ್ಪಣೆ

ಮಾದಪ್ಪನ ಭಕ್ತರು ನಗದಿನ ಜೊತೆಗೆ ಬೆಲೆಬಾಳುವ ಲೋಹಗಳನ್ನೂ ಹರಕೆಯ ರೂಪದಲ್ಲಿ ಭಕ್ತಿಯಿಂದ ಸಮರ್ಪಿಸಿದ್ದಾರೆ. ಹುಂಡಿಯಲ್ಲಿ ಒಟ್ಟು 44 ಗ್ರಾಂ ಚಿನ್ನ ಹಾಗೂ 977 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ. ಇದರ ಜೊತೆಗೆ, ಹುಂಡಿ ಎಣಿಕೆ ಕಾರ್ಯದ ವೇಳೆ ಏಳು ವಿದೇಶಿ ಕರೆನ್ಸಿ ನೋಟುಗಳು ಕೂಡ ಪತ್ತೆಯಾಗಿವೆ. ವಿಶೇಷವೆಂದರೆ, ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಯಿಂದ ಹಿಂಪಡೆದಿರುವ ನಿಷೇಧಿತ ಹತ್ತು 2,000 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನು ಸಹ ಭಕ್ತರು ಹುಂಡಿಗೆ ಹಾಕಿದ್ದಾರೆ.

ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಈ ಬೃಹತ್ ಮೊತ್ತದ ಹುಂಡಿ ಎಣಿಕೆ ಕಾರ್ಯವು ಅತ್ಯಂತ ಯಶಸ್ವಿಯಾಗಿ ಮತ್ತು ಬಿಗಿ ಭದ್ರತೆಯಲ್ಲಿ ಜರುಗಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಈ ಅಪಾರ ಪ್ರಮಾಣದ ಕಾಣಿಕೆಯನ್ನು ಮಾದಪ್ಪನಿಗೆ ಸಮರ್ಪಿಸಿದ್ದಾರೆ.

Leave a Reply

Your email address will not be published. Required fields are marked *