Shocking Accident | ಆಟವಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಜವರಾಯನಂತೆ ಎರಗಿದ ಕಾಂಪೌಂಡ್ ಗೇಟ್!

ಹಂಚಿಕೊಳ್ಳಿ

ಬೆಂಗಳೂರಿನ ಉತ್ತರ ತಾಲೂಕಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್ ಮೈಮೇಲೆ ಬಿದ್ದ ಪರಿಣಾಮ ಐದು ವರ್ಷದ ಪುಟಾಣಿ ಮಗು ಮೃ*ತಪಟ್ಟಿದೆ. ಈ ದುರ್ಘಟನೆಯಲ್ಲಿ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಮೃ*ತಪಟ್ಟ ದುರ್ದೈವಿ ಮಗುವನ್ನು ಯಾದಗಿರಿ ಮೂಲದ, ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿರುವ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಹೊಸ ಕೆಲಸದ ಹುಡುಕಾಟದಲ್ಲಿದ್ದ ದಾವಲ್ ಸಾಬ್ ಅವರ ಪತ್ನಿ ಹಾಗೂ ಮಗು ಅಫೀನ್ ಕೇವಲ ಐದು ದಿನಗಳ ಹಿಂದಷ್ಟೇ ಬಾಗಲೂರು ವ್ಯಾಪ್ತಿಯ ಬಂಡಿಕೊಡಿಗೇಹಳ್ಳಿಯಲ್ಲಿರುವ ತಮ್ಮ ತಂಗಿಯ ಮನೆಗೆ ಬಂದಿದ್ದರು ಎನ್ನಲಾಗಿದೆ.

ಬುಧವಾರ (ಜೂನ್ 17, 2026) ಸಂಜೆ ಸುಮಾರು 6:30ರ ವೇಳೆಗೆ, ಅಫೀನ್ ಪಕ್ಕದ ಮನೆಯ ಮಕ್ಕಳಾದ ಸಮನ್ವಿ ಹಾಗೂ ಮತ್ತೊಂದು ಮಗುವಿನೊಂದಿಗೆ ಬಿ.ಸಿ. ನರಸಪ್ಪ ಎಂಬುವರ ಮನೆಯ ಕಾಂಪೌಂಡ್ ಗೇಟ್ ಬಳಿ ಆಟವಾಡುತ್ತಿದ್ದನು. ಮಕ್ಕಳು ಆಟದ ಭರದಲ್ಲಿ ಕಬ್ಬಿಣದ ಗೇಟ್ ಹಿಡಿದು ಜೀಕಾಡುತ್ತಿದ್ದಾಗ, ಗೇಟ್‌ನ ಭಾರ ತಾಳಲಾರದೆ ಕಾಂಪೌಂಡ್ ಗೋಡೆಯು ಗೇಟ್ ಸಮೇತ ಒಮ್ಮೆಲೇ ಮಕ್ಕಳ ಮೇಲೆ ಕುಸಿದು ಬಿದ್ದಿದೆ.

ಈ ಘಟನೆಯನ್ನು ನೋಡಿ ಸ್ಥಳೀಯರು ತಕ್ಷಣವೇ ಓಡಿ ಬಂದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳಿಬ್ಬರನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ತಲೆ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದ್ದ ಅಫೀನ್ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. 

ತೀವ್ರವಾಗಿ ಗಾಯಗೊಂಡಿರುವ ಮತ್ತೊಂದು ಮಗು ಸಮನ್ವಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವಿಷಯ ತಿಳಿಯುತ್ತಿದ್ದಂತೆ ಬಾಗಲೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಂಪೌಂಡ್ ಗೋಡೆಯ ಅವೈಜ್ಞಾನಿಕ ನಿರ್ಮಾಣದ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds