ಬೆಂಗಳೂರು: ಪೊಲೀಸ್ ಇಲಾಖೆಯ ತಾಂತ್ರಿಕ ಎಡವಟ್ಟು ಹಾಗೂ ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ರಾಜಧಾನಿಯ ನಟೋರಿಯಸ್ ರೌಡಿಶೀಟರ್‌ಗಳಿಗೆ (Rowdy Sheeters) ಭಾರಿ ‘ಗುಡ್ ನ್ಯೂಸ್’ ಸಿಕ್ಕಿದೆ. ಖಾಕಿ ಪಡೆಯ ಬೇಜವಾಬ್ದಾರಿತನದಿಂದಾಗಿ ಬೆಂಗಳೂರಿನ ಮೋಸ್ಟ್ ವಾಟೆಂಡ್ ರೌಡಿಗಳಾದ ಸುನಿಲ್ ಕುಮಾರ್ ಅಲಿಯಾಸ್ ‘ಸೈಲೆಂಟ್ ಸುನಿಲ್’ ಹಾಗೂ ರೋಹಿತ್ ಅಲಿಯಾಸ್ ‘ಒಂಟೆ ರೋಹಿತ್’ ಸೇರಿದಂತೆ ಒಟ್ಟು 66 ಜನ ರೌಡಿ ಅಸಾಮಿಗಳು ರೌಡಿಪಟ್ಟಿಯಿಂದ ಅಧಿಕೃತವಾಗಿ ಮುಕ್ತಿ ಪಡೆದುಕೊಂಡಿದ್ದಾರೆ.
ಏನಿದು ಘಟನೆ? ಏಕೆ ಈ ರಿಲೀಫ್? ಕಳೆದ 2022ರಲ್ಲಿ ಕರ್ನಾಟಕ ಹೈಕೋರ್ಟ್ (High Court), ರೌಡಿಪಟ್ಟಿ ತೆರೆಯುವ ಮತ್ತು ಅದನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ, ಪೊಲೀಸ್ ಇಲಾಖೆಯು ಹೈಕೋರ್ಟ್ ಸೂಚಿಸಿದ್ದ ಈ ಮಹತ್ವದ ಗೈಡ್‌ಲೈನ್ಸ್ ಪಾಲಿಸುವಲ್ಲಿ ಸಂಪೂರ್ಣವಾಗಿ ಎಡವಿದೆ. ಪೊಲೀಸ್ ದೂರು ಪ್ರಾಧಿಕಾರದ (Police Complaints Authority) ಮುಂದೆ ಈ ರೌಡಿಗಳ ವಿರುದ್ಧ ಸರಿಯಾದ ಮತ್ತು ಬಲವಾದ ದಾಖಲೆಗಳನ್ನು ಸಕಾಲದಲ್ಲಿ ಮಂಡಿಸಲು ಪೊಲೀಸರು ವಿಫಲರಾಗಿದ್ದಾರೆ. ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣ, ಪ್ರಾಧಿಕಾರವು ಅನಿವಾರ್ಯವಾಗಿ ಈ 66 ಮಂದಿ ನಟೋರಿಯಸ್ ರೌಡಿಶೀಟರ್‌ಗಳನ್ನು ರೌಡಿಪಟ್ಟಿಯಿಂದ ಕೈಬಿಡುವಂತೆ ಮಹತ್ವದ ಆದೇಶ ಹೊರಡಿಸಿದೆ.
ವಿಶೇಷವೆಂದರೆ, ತನ್ನ ಹೆಸರನ್ನು ರೌಡಿಪಟ್ಟಿಯಿಂದ ತೆಗೆದುಹಾಕುವಂತೆ ಕೋರಿ ಸೈಲೆಂಟ್ ಸುನಿಲ್ ಈ ಹಿಂದೆ ಪೊಲೀಸ್ ಪ್ರಾಧಿಕಾರಕ್ಕೆ ನೂರಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಿದ್ದನು. ಕೊನೆಗೂ ಕಳೆದ ಮೇ 19 ರಂದು ನಡೆದ ಪೊಲೀಸ್ ಪ್ರಾಧಿಕಾರದ ಉನ್ನತ ಮಟ್ಟದ ಸಭೆಯಲ್ಲಿ, ಸೈಲೆಂಟ್ ಸುನಿಲ್ ಹೆಸರನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯ ರೌಡಿಪಟ್ಟಿಯಿಂದ ತಕ್ಷಣವೇ ಕೈಬಿಡುವಂತೆ ಅಧಿಕೃತವಾಗಿ ಆದೇಶಿಸಲಾಗಿದೆ. ಖಾಕಿ ಇಲಾಖೆಯ ಈ ಉದಾಸೀನತೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Reply