ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಎಡವಟ್ಟು: ಕರ್ನಾಟಕದಲ್ಲೇ ಇಲ್ಲದ ಬ್ಯಾಂಕ್‌ಗಳ ಖಾತೆಗೂ ಜಮೆಯಾಯ್ತು ಹಣ!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ (Gruhalakshmi) ಯೋಜನೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಎಡವಟ್ಟು ಹಾಗೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕರ್ನಾಟಕದ ಮಹಿಳೆಯರಿಗಾಗಿ ಮೀಸಲಾದ ಯೋಜನೆ ಈಗ ಹೊರರಾಜ್ಯದವರ ಪಾಲಾಗುತ್ತಿದೆಯೇ? ಎಂಬ ಗಂಭೀರ ಪ್ರಶ್ನೆ ಮೂಡಿದೆ. ಏಕೆಂದರೆ ಕರ್ನಾಟಕದಲ್ಲೇ ಅಸ್ತಿತ್ವದಲ್ಲಿ ಇಲ್ಲದ ಹೊರರಾಜ್ಯಗಳ ಬ್ಯಾಂಕ್ ಖಾತೆಗಳಿಗೂ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2,000 ರೂಪಾಯಿ ಹಣ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಕೇವಲ ಸಾಮಾನ್ಯ ಕಮರ್ಷಿಯಲ್ ಬ್ಯಾಂಕ್‌ಗಳಷ್ಟೇ ಅಲ್ಲದೆ, ವಿವಿಧ ಪೇಮೆಂಟ್ಸ್ ಬ್ಯಾಂಕ್‌ಗಳಿಗೂ (ಉದಾಹರಣೆಗೆ ಏರ್‌ಟೆಲ್ ಪೇಮೆಂಟ್ಸ್   ಬ್ಯಾಂಕ್) ದೊಡ್ಡ ಮಟ್ಟದಲ್ಲಿ ಹಣ ಪಾವತಿಯಾಗಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ, ದೇಶದ ವಿವಿಧ ಜಿಲ್ಲೆಗಳ ಬೇರೆ ಬೇರೆ ಬ್ಯಾಂಕ್‌ಗಳಿಗೆ ಒಂದೇ ರೀತಿಯ ‘IFSC’ ಕೋಡ್ ಬಳಸಿ ಹಣ ವರ್ಗಾವಣೆ ಮಾಡಲಾಗಿದೆ. ಇವೆಲ್ಲದರ ನಡುವೆ ವಂಚನೆಯ ಪರಮಾವಧಿ ಎಂಬಂತೆ, ಬ್ಯಾಂಕಿಂಗ್ ಇತಿಹಾಸದಲ್ಲೇ ಹೆಸರಿಲ್ಲದ ‘NULL’ (ನಲ್) ಹಾಗೂ ‘ಝೀರೋ ಪೇಮೆಂಟ್’ ಎಂದು ನಮೂದಾಗಿರುವ ಖಾತೆಗಳಿಗೂ ಹಣ ಸಂದಾಯವಾಗಿದೆ!

‘NULL’ ಹೆಸರಿನ ಖಾತೆಯಿರುವ ನಾಲ್ಕು ಜನ ಫಲಾನುಭವಿಗಳಿಗೆ ಕಳೆದ 22 ಕಂತುಗಳಿಂದ ಬರೋಬ್ಬರಿ 44,000 ರೂಪಾಯಿ ಜಮೆಯಾಗಿದೆ. ಈ ಅನಾಮಧೇಯ ಬ್ಯಾಂಕ್ ಖಾತೆಗಳಿಗೆ ಹಣ ಹೇಗೆ ಲಿಂಕ್ ಆಯ್ತು ಮತ್ತು ಹೇಗೆ ವರ್ಗಾವಣೆಯಾಯ್ತು ಎಂಬ ಯಾವುದೇ ಅಧಿಕೃತ ಮಾಹಿತಿ ಸರ್ಕಾರದ ಬಳಿ ಇಲ್ಲ. ಈ ಭಾರಿ ಎಡವಟ್ಟು ಸಿದ್ದರಾಮಯ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ತಕ್ಷಣ ಎಚ್ಚೆತ್ತಿರುವ ಸರ್ಕಾರ ಗ್ಯಾರಂಟಿ ಯೋಜನೆಗಳ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ಖಾತೆ ಮುಟ್ಟುಗೋಲು ಹಾಕಿಕೊಳ್ಳಲು ವಿಶೇಷ ಕಾರ್ಯಾಚರಣೆಗೆ ಮುಂದಾಗಿದೆ.

Leave a Reply

Your email address will not be published. Required fields are marked *