ವಾಷಿಂಗ್ಟನ್ (ಅಮೆರಿಕ): ಅಮೆರಿಕದ ಮಿಸ್ಸೋರಿ ರಾಜ್ಯದಲ್ಲಿ ಅತ್ಯಂತ ಕರುಣಾಜನಕ ಹಾಗೂ ಭೀಕರ ವಿಮಾನ ದುರಂತವೊಂದು ಸಂಭವಿಸಿದೆ. ಇಲ್ಲಿನ ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದ (Butler Memorial Airport) ಸಮೀಪದ ಮೈದಾನವೊಂದರಲ್ಲಿ ಸ್ಕೈಡೈವರ್‌ಗಳನ್ನು (Skydivers) ಹೊತ್ತೊಯ್ಯುತ್ತಿದ್ದ ಲಘು ವಿಮಾನವೊಂದು ಹಠಾತ್ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 12 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಸಾಹಸದ ಪ್ರವಾಸಕ್ಕೆ ಹೊರಟಿದ್ದವರೆಲ್ಲರೂ ವಿಮಾನ ದುರಂತದಲ್ಲಿ ಸಜೀವ ದಹನವಾಗಿರುವುದು ಜಾಗತಿಕವಾಗಿ ಭಾರಿ ಆಘಾತ ಮೂಡಿಸಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 11:30ರ ಸುಮಾರಿಗೆ ಸ್ಕೈಡೈವರ್‌ಗಳನ್ನು ಕರೆದೊಯ್ಯುತ್ತಿದ್ದ ಈ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪತನಕ್ಕೂ ಮುನ್ನ ಪೈಲಟ್ ಕಂಟ್ರೋಲ್ ರೂಂಗೆ ‘ತುರ್ತು ಸಂದೇಶ’ವನ್ನು (Emergency Message) ರವಾನಿಸಿದ್ದರು. ಆದರೆ, ದುರದೃಷ್ಟವಶಾತ್ ರನ್‌ವೇ ತಲುಪುವ ಮುನ್ನವೇ ವಿಮಾನವು ಮೈದಾನಕ್ಕೆ ಅಪ್ಪಳಿಸಿ ಭಾರಿ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಮಿಸ್ಸೋರಿ ಹೆದ್ದಾರಿ ಗಸ್ತು ವಿಭಾಗದ ಸಾರ್ಜಂಟ್ ಜೆಸ್ಟಿನ್ ಇವಿಂಗ್ ಖಚಿತಪಡಿಸಿದ್ದಾರೆ.

ಅಪಘಾತದ ತೀವ್ರತೆಗೆ ಇಡೀ ಪ್ರದೇಶ ದಟ್ಟ ಹೊಗೆಯಿಂದ ಆವೃತವಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ತುರ್ತು ಸ್ಪಂದನಾ ಪಡೆಯ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರಾದರೂ ಯಾರನ್ನೂ ಬದುಕಿಸಲು ಸಾಧ್ಯವಾಗಲಿಲ್ಲ. ಅಪಘಾತ ನಡೆದ ಜಾಗದ ಚಿತ್ರಣ ಅತ್ಯಂತ ಭಯಾನಕ ಮತ್ತು ಶೋಚನೀಯವಾಗಿತ್ತು ಎಂದು ರಕ್ಷಣಾ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.


Leave a Reply