ಮುಂಬೈ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಹಸಿಲ್‌ನಲ್ಲಿ ಭಾನುವಾರ ಸಂಜೆ ಅತ್ಯಂತ ಭೀಕರ ಹಾಗೂ ಹೃದಯವಿದ್ರಾವಕ ರಸ್ತೆ ಅಪಘಾತ ಸಂಭವಿಸಿದೆ. ಭಕ್ತರನ್ನು ಹೊತ್ತೊಯ್ಯುತ್ತಿದ್ದ ಪಿಕ್‌ಅಪ್ (pickup van)ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಹಾಗೂ ನಾಲ್ವರು ಮುಗ್ಧ ಮಕ್ಕಳು ಸೇರಿ ಒಟ್ಟು ಎಂಟು ಮಂದಿ ಜಾಗದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಭೀಕರ ದುರಂತದಲ್ಲಿ ಮತ್ತೊಂದು ಏಳು ಜನ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಢರಪುರ ಮೂಲದ ಒಂದೇ ಕುಟುಂಬದ ನೆರೆಹೊರೆಯವರು ಹಾಗೂ ಸಂಬಂಧಿಕರನ್ನೊಳಗೊಂಡ 15 ಜನರ ತಂಡವು ಮಾಸ್ವಾಡ್‌ನ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಿ ಮರಳಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿತ್ತು. ಭಾನುವಾರ ಸಂಜೆ 5 ಗಂಟೆಯ ಸುಮಾರಿಗೆ ತಂಡುಲ್ವಾಡಿ ಗ್ರಾಮದ ಹೆದ್ದಾರಿ ಬಳಿ ಬರುತ್ತಿದ್ದಂತೆ, ಚಾಲಕನ ಅಜಾಗರೂಕತೆಯಿಂದಾಗಿ ಪಿಕ್-ಅಪ್ ವಾಹನವು ಹತೋಟಿ ತಪ್ಪಿ ರಸ್ತೆಬದಿಯ ಕೃಷಿ ಜಮೀನಿಗೆ ನುಗ್ಗಿ, ಅಲ್ಲಿದ್ದ ದೊಡ್ಡ ತೆರೆದ ಬಾವಿಗೆ ನೇರವಾಗಿ ಉರುಳಿ ಬಿದ್ದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸೋಲಾಪುರ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಕುಲಕರ್ಣಿ ನೇತೃತ್ವದ ತಂಡ, ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದೆ. ಈ ಘೋರ ದುರಂತಕ್ಕೆ ತೀವ್ರ ಕಂಬನಿ ಮಿಡಿದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Leave a Reply