ರಾಜ್ಯಕ್ಕೆ ಮುಂಗಾರು ಮಧ್ಯೆಯೇ ಎಲ್ ನಿನೊ ಆತಂಕ: ಶೇ.10ರಷ್ಟು ಮಳೆ ಕೊರತೆ ಸಾಧ್ಯತೆ, ಕೃಷಿಗೆ ಕಂಟಕ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಗಾಲದ ಚಟುವಟಿಕೆಗಳು ಆರಂಭವಾಗಿರುವ ಮಧ್ಯೆಯೇ ಈಗ ‘ಎಲ್ ನಿನೊ’ (El Nino) ಭೀತಿ ಎದುರಾಗಿದೆ. ಈ ಕುರಿತು ಭಾರತೀಯ ಹವಮಾನ ಇಲಾಖೆಯ (IMD) ಹಿರಿಯ ಹವಾಮಾನ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ಮಹತ್ವದ ಹಾಗೂ ಆತಂಕಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗಿರುವ ತಾಪಮಾನದ ತೀವ್ರ ಏರಿಕೆಯಿಂದಾಗಿ, ನೈರುತ್ಯ ದಿಕ್ಕಿನಿಂದ ಭಾರತದತ್ತ ಬೀಸುವ ಮುಂಗಾರು ಮಾರುತಗಳ (ಗಾಳಿ) ವೇಗ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕೃತಿ ವೈಪರೀತ್ಯದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇದೆ. ವಿಶೇಷವಾಗಿ ಕರಾವಳಿ ಕರ್ನಾಟಕ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತಗ್ಗಲಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ ಈ ಬಾರಿ ಸುಮಾರು ಶೇ.10ರಷ್ಟು ಮಳೆ ಕೊರತೆಯಾಗುವ ಸಾಧ್ಯತೆ ದಟ್ಟವಾಗಿದೆ. ಮುಂಗಾರು ಆರಂಭದಲ್ಲೇ ಮಳೆ ಕೊರತೆಯ ಮುನ್ಸೂಚನೆ ಸಿಕ್ಕಿರುವುದು ರಾಜ್ಯದ ಕೃಷಿ ಚಟುವಟಿಕೆಗಳ ಮೇಲೆ ತೀವ್ರವಾದ ಮಸುಕಾದ ನೆರಳು ಬೀರಲಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಎಲ್ ನಿನೊ (El Nino) ಎಂದರೆ ಸರಳವಾಗಿ ಹೇಳಬೇಕೆಂದರೆ ಪೆಸಿಫಿಕ್ ಮಹಾಸಾಗರದ ವಾತಾವರಣದಲ್ಲಿ ಉಂಟಾಗುವ ಒಂದು ನೈಸರ್ಗಿಕ ಬದಲಾವಣೆ ಅಥವಾ ಪ್ರಕೃತಿ ವೈಪರೀತ್ಯವಾಗಿದೆ. ಇದು ಜಾಗತಿಕ ಹವಾಮಾನದ ಮೇಲೆ, ವಿಶೇಷವಾಗಿ ಭಾರತದ ಮುಂಗಾರು ಮಳೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ.

Leave a Reply

Your email address will not be published. Required fields are marked *