ಆನ್‌ಲೈನ್ ಟ್ರೇಡಿಂಗ್ ಆಮಿಷ, Whatsapp ಗ್ರೂಪ್ ನಂಬಿ 55.88 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ!

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 55.88 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಮಹದೇವಪುರ ಸಮೀಪದ ನಾರಾಯಣಪುರದ ನಿವಾಸಿ ಪಿ.ಕೆ. ಪಟೇಲ್ ಎಂಬುವವರೇ ಈ ಬೃಹತ್ ಆನ್‌ಲೈನ್ ವಂಚನೆಗೆ ಬಲಿಯಾದವರು.

ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಗಾಳ

ಕಳೆದ ಮೇ 22 ರಂದು ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ಸೈಬರ್ ಖದೀಮರು, ಪಿ.ಕೆ. ಪಟೇಲ್ ಅವರನ್ನು ಟ್ರೇಡಿಂಗ್ ಸಂಬಂಧಿತ ವಾಟ್ಸ್‌ಆ್ಯಪ್ ಗ್ರೂಪ್‌ವೊಂದಕ್ಕೆ ಸೇರ್ಪಡೆ ಮಾಡಿದ್ದರು. ಅದೇ ಗ್ರೂಪ್‌ನಲ್ಲಿದ್ದ ಇತರ ಸದಸ್ಯರು (ವಂಚಕರೇ ಸೃಷ್ಟಿಸಿದ ನಕಲಿ ಖಾತೆಗಳು) ಟ್ರೇಡಿಂಗ್ ಮತ್ತು ಲಾಭದ ಬಗ್ಗೆ ನಿರಂತರವಾಗಿ ಚರ್ಚಿಸುತ್ತಿದ್ದರು. ಇದನ್ನು ಗಮನಿಸಿ ವಿಶ್ವಾಸ ಬೆಳೆಸಿಕೊಂಡ ಪಟೇಲ್ ಅವರಿಗೆ, ವಂಚಕರು ಹೂಡಿಕೆ ಮಾಡುವಂತೆ ಲಿಂಕ್ ಒಂದನ್ನು ಕಳುಹಿಸಿದ್ದರು. ನಿರ್ದಿಷ್ಟ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿ, ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲೇ ಭಾರಿ ಲಾಭಾಂಶ ಬರುವುದಾಗಿ ನಂಬಿಸಿದ್ದರು.

50 ಸಾವಿರದಿಂದ ಶುರುವಾಗಿ 55 ಲಕ್ಷಕ್ಕೆ ಅಂತ್ಯ

ವಂಚಕರ ಮಾತು ಹಾಗೂ ಆ್ಯಪ್‌ನಲ್ಲಿದ್ದ ನಕಲಿ ಲಾಭಾಂಶದ ಅಂಕಿ-ಅಂಶಗಳನ್ನು ನಂಬಿದ ಪಟೇಲ್ ಅವರು, ಆರಂಭದಲ್ಲಿ ಕೇವಲ 50 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ತದನಂತರ ವಂಚಕರು ನೀಡಿದ ಆಮಿಷಕ್ಕೆ ಸಂಪೂರ್ಣವಾಗಿ ಒಳಗಾದ ಅವರು, ಹಂತ ಹಂತವಾಗಿ ಸೈಬರ್ ಕಳ್ಳರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 55.88 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದರು.

ಅಸಲು ಹಿಂಪಡೆಯಲು ಹೋದಾಗ ಬಯಲಾದ ವಂಚನೆ

ಹೂಡಿಕೆ ಮಾಡಿ ಕೆಲವು ದಿನಗಳು ಕಳೆದ ಬಳಿಕ, ತಮ್ಮ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಲು ಪಟೇಲ್ ಮುಂದಾಗಿದ್ದಾರೆ. ಆದರೆ, ಹಣ ಹಿಂಪಡೆಯಲು ಆ್ಯಪ್‌ನಲ್ಲಿ ಅವಕಾಶ ಇರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಹಣ ಡ್ರಾ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ವಂಚಕರು ಒತ್ತಾಯಿಸಿದ್ದಾರೆ.

ಈ ಹಂತದಲ್ಲಿ ತೀವ್ರ ಅನುಮಾನಗೊಂಡ ಪಿ.ಕೆ. ಪಟೇಲ್ ಅವರು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ, ತಾವು ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಸಂಪೂರ್ಣವಾಗಿ ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ಅರಿವಿಗೆ ಬಂದಿದೆ. ತಕ್ಷಣವೇ ಅವರು ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ. ಆನ್‌ಲೈನ್ ಹೂಡಿಕೆಗಳ ವಿಚಾರದಲ್ಲಿ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *