ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ದಿನದಿಂದ ದಿನಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಮನೆಮನೆಯ ನೆಚ್ಚಿನ ಕಥಾಹಂದರವಾಗಿದೆ.
ರಾಯರ ಪವಿತ್ರ ಜೀವನದ ದಿವ್ಯ ಪಯಣವನ್ನು ಕಣ್ತುಂಬಿಕೊಳ್ಳುತ್ತಿರುವ ಭಕ್ತಸಾಗರಕ್ಕೆ ಈ ವಾರಾಂತ್ಯದಲ್ಲಿ ಅತ್ಯಂತ ಕುತೂಹಲಕಾರಿ ಹಾಗೂ ಐತಿಹಾಸಿಕ ಕ್ಷಣಗಳನ್ನು ವೀಕ್ಷಿಸುವ ಮಹಾ ಯೋಗ ಒದಗಿಬಂದಿದೆ. ಶಂಕುಕರ್ಣನ ಜನ್ಮ ರಹಸ್ಯದಿಂದ ಆರಂಭವಾಗಿ ಪ್ರಹ್ಲಾದ, ಬಾಹ್ಲೀಕ ಮತ್ತು ವ್ಯಾಸರಾಯರ ದಿವ್ಯ ಅವತಾರಗಳ ಸರಣಿಯ ನಂತರ ನಾಲ್ಕನೇ ಜನ್ಮದಲ್ಲಿ ವೆಂಕಟನಾಥರಾಗಿ ಧರೆಗಿಳಿದ ರಾಯರ ಲೀಲೆಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿವೆ.
ರೈತರಿಗೆ ವಿತರಿಸಿದ್ದ ಹುಳು ಬಿದ್ದ ಭತ್ತದ ಮೂಟೆಯನ್ನು ತಮ್ಮ ಮಂತ್ರಾಕ್ಷತೆಯ ಮಹಿಮೆಯಿಂದ ಪರಿಶುದ್ಧ ಧಾನ್ಯವನ್ನಾಗಿ ಪರಿವರ್ತಿಸಿದ ಪವಾಡವು ಕಥೆಗೆ ಹೊಸ ತಿರುವು ನೀಡಿದ್ದರೆ, ಇತ್ತ ಗೃಹಸ್ಥಾಶ್ರಮದಲ್ಲಿದ್ದ ವೆಂಕಟನಾಥರು ಸನ್ಯಾಸತ್ವದ ದೀಕ್ಷೆ ಪಡೆಯಲು ಮುಂದಾದಾಗ ಅವರ ಪತ್ನಿ ಸರಸ್ವತಿಯವರು ಅನುಭವಿಸುವ ವಿರಹದ ವೇದನೆ ಹಾಗೂ ಭಾವುಕತೆಯ ಉತ್ತುಂಗದ ಸನ್ನಿವೇಶಗಳು ವೀಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತವೆ.
ಇದೀಗ ತಂಜಾವೂರಿನ ವೈಭವದ ಆಸ್ಥಾನದಲ್ಲಿ, ರಾಜ ರಘುನಾಥ ಭೂಪಾಲನ ಸಮ್ಮುಖದಲ್ಲಿ ಪರಮಪೂಜ್ಯ ಗುರು ಸುಧೀಂದ್ರ ತೀರ್ಥರು ವೆಂಕಟನಾಥರಿಗೆ ಸನ್ಯಾಸ ದೀಕ್ಷೆಯನ್ನು ಅನುಗ್ರಹಿಸಿ, ಕಲಿಯುಗದ ಕಲ್ಪತರು ‘ಶ್ರೀ ರಾಘವೇಂದ್ರ ತೀರ್ಥರು’ ಎಂದು ನಾಮಕರಣ ಮಾಡುವ ಆ ದೈವಿಕ ಪಟ್ಟಾಭಿಷೇಕದ ಅಪೂರ್ವ ಕ್ಷಣಗಳು ಈ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಅನಾವರಣಗೊಳ್ಳಲಿವೆ.
ಭಕ್ತಿ, ಜ್ಞಾನ ಮತ್ತು ವೈರಾಗ್ಯದ ಮೂರ್ತಿರೂಪವಾಗಿರುವ ರಾಯರ ಈ ಮಹೋನ್ನತ ಪಾತ್ರದಲ್ಲಿ ನಟ ಪರೀಕ್ಷಿತ್ ಅವರು ತಮ್ಮ ಜೀವಂತ ಅಭಿನಯದ ಮೂಲಕ ಮನೆಮನೆಗೆ ರಾಯರ ಆದರ್ಶಗಳನ್ನು ತಲುಪಿಸುತ್ತಿದ್ದು, ಈ ಪವಿತ್ರ ಸಂಚಿಕೆಗಳನ್ನು ಹಾಗೂ ಇಡೀ ಧಾರಾವಾಹಿಯ ಎಲ್ಲಾ ಡಿಜಿಟಲ್ ಎಪಿಸೋಡ್ಗಳನ್ನು ವೀಕ್ಷಕರು ಯಾವುದೇ ಜಾಹೀರಾತುಗಳ ಅಡೆತಡೆಯಿಲ್ಲದೆ ಅಧಿಕೃತ ಜೀ5 (Zee5) ವೆಬ್ಸೈಟ್ನಲ್ಲಿ ಕಣ್ತುಂಬಿಕೊಳ್ಳಬಹುದು.

Leave a Reply