ಕೇಂದ್ರ ಸರ್ಕಾರವು ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ (COAS) ಪ್ರಸ್ತುತ ಸೇನಾ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ನೇಮಕ ಮಾಡಿದೆ. ಜೂನ್ 30, 2026 ರಂದು ಹಾಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಸೇವೆಯಿಂದ ನಿವೃತ್ತರಾಗಲಿದ್ದು, ಅದೇ ದಿನ ಮಧ್ಯಾಹ್ನ ಧೀರಜ್ ಸೇಠ್ ಅವರು ಜನರಲ್ ಶ್ರೇಣಿಯೊಂದಿಗೆ ನೂತನ ಹುದ್ದೆಯ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸುಮಾರು ನಾಲ್ಕು ದಶಕಗಳ ಸುದೀರ್ಘ ಸೇವೆ
ಪುಣೆಯ ಖಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA) ಹಳೆಯ ವಿದ್ಯಾರ್ಥಿಯಾಗಿರುವ ಧೀರಜ್ ಸೇಠ್, ಡಿಸೆಂಬರ್ 1986 ರಲ್ಲಿ ಶಸ್ತ್ರಸಜ್ಜಿತ ಕಾರ್ಪ್ಸ್‌ಗೆ (Armoured Corps) ಅಧಿಕಾರಿಯಾಗಿ ನಿಯೋಜನೆಗೊಂಡರು. ಸುಮಾರು ನಾಲ್ಕು ದಶಕಗಳ ಸುದೀರ್ಘ ಹಾಗೂ ವಿಶಿಷ್ಟ ಸೇನಾ ವೃತ್ತಿಜೀವನದಲ್ಲಿ ಅವರು ಕಾರ್ಯಾಚರಣೆ, ಕಾರ್ಯತಂತ್ರ ಮತ್ತು ಸಾಂಸ್ಥಿಕ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಭಾರತೀಯ ಸೇನೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಹಾಗೂ ದೀರ್ಘಕಾಲೀನ ರೂಪಾಂತರದಲ್ಲಿ ಅವರ ಕೊಡುಗೆ ಅಪಾರವಾಗಿದೆ.

ಪ್ರಮುಖ ಹುದ್ದೆಗಳ ಸಮರ್ಥ ನಿರ್ವಹಣೆ
ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಎಲ್ಲಾ ಹಂತದ ಕಾರ್ಯಾಚರಣೆಯ ಪರಿಸರದಲ್ಲಿ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಪಡೆಯನ್ನು ಮುನ್ನಡೆಸಿದ ಅನುಭವವೂ ಅವರಿಗಿದೆ. ಲೆಫ್ಟಿನೆಂಟ್ ಜನರಲ್ ಆಗಿ ಅವರು ಭಾರತೀಯ ಸೇನೆಯ ಪ್ರಮುಖ ಸ್ಟ್ರೈಕ್ ಫಾರ್ಮೇಶನ್ ಆದ ‘ಸುದರ್ಶನ ಚಕ್ರ ಕಾರ್ಪ್ಸ್’ ಅನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ತದನಂತರ ದೆಹಲಿ ವಲಯದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಮಿಲಿಟರಿ ಕಾರ್ಯಕ್ರಮಗಳ ಜವಾಬ್ದಾರಿ ನಿಭಾಯಿಸಿದ್ದರು.
ಸೇನಾ ಕಮಾಂಡರ್ ಆಗಿ ಬಡ್ತಿ ಪಡೆದ ಬಳಿಕ ನೈಋತ್ಯ ಕಮಾಂಡ್ ಹಾಗೂ ದಕ್ಷಿಣ ಕಮಾಂಡ್ ಎರಡನ್ನೂ ಮುನ್ನಡೆಸಿದ ಅಪರೂಪದ ಹೆಗ್ಗಳಿಕೆ ಇವರದ್ದಾಗಿದೆ. ಸುಮಾರು ಎರಡುವರೆ ವರ್ಷಗಳ ಕಾಲ ಅವರು ಅತ್ಯಂತ ಸೂಕ್ಷ್ಮ ವಲಯಗಳಲ್ಲಿ ಕಾರ್ಯತಂತ್ರದ ಮೇಲ್ವಿಚಾರಣೆಯನ್ನು ಒದಗಿಸಿದ್ದಾರೆ.
ಸೇನಾ ಆಧುನೀಕರಣದಲ್ಲಿ ಪ್ರಮುಖ ಪಾತ್ರ
ಸೇನಾ ಪಡೆಯ ಆಧುನೀಕರಣದಲ್ಲಿ ಧೀರಜ್ ಸೇಠ್ ಅವರ ಅತ್ಯುತ್ತಮ ಕಾರ್ಯವೈಖರಿಯು ವ್ಯಾಪಕ ಮನ್ನಣೆ ಗಳಿಸಿದೆ. ಸೇನಾ ಕೇಂದ್ರ ಕಚೇರಿಯ ಸ್ಟ್ರಾಟೆಜಿಕ್ ಪ್ಲಾನಿಂಗ್ ಮತ್ತು ಕೆಪಾಬಿಲಿಟಿ ಡೆವಲಪ್‌ಮೆಂಟ್ ವಿಭಾಗಗಳಲ್ಲಿ ನಿರ್ಣಾಯಕ ಹುದ್ದೆಗಳನ್ನು ನಿಭಾಯಿಸಿರುವ ಅವರು, ಭವಿಷ್ಯದ ಯುದ್ಧಭೂಮಿಯ ಅಗತ್ಯತೆಗಳಿಗೆ ತಕ್ಕಂತೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಉನ್ನತ ಸೇನಾ ಶಿಕ್ಷಣದಲ್ಲಿಯೂ ಸದಾ ಮುಂಚೂಣಿಯಲ್ಲಿರುವ ಅವರು ಪ್ಯಾರಿಸ್‌ನಲ್ಲಿ ಪ್ರತಿಷ್ಠಿತ ಕಮಾಂಡ್ ಅಂಡ್ ಸ್ಟಾಫ್ ಕೋರ್ಸ್, ಹೈಯರ್ ಕಮಾಂಡ್ ಕೋರ್ಸ್ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಪದವೀಧರರಾಗಿದ್ದಾರೆ. ಇವರ ವಿಶಿಷ್ಟ ಸೇವೆಗಾಗಿ ಅತ್ಯುನ್ನತ ಸೇನಾ ಪ್ರಶಸ್ತಿಗಳಾದ ಪರಮ ವಿಶಿಷ್ಟ ಸೇವಾ ಮೆಡಲ್ (PVSM), ಉತ್ತಮ ಯುದ್ಧ ಸೇವಾ ಮೆಡಲ್ (UYSM) ಮತ್ತು ಅತಿ ವಿಶಿಷ್ಟ ಸೇವಾ ಮೆಡಲ್ (AVSM) ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.


Leave a Reply