ಬ್ಯಾಂಕ್ಗಳಿಂದ ಪಡೆದಿದ್ದ ಬರೋಬ್ಬರಿ 1,454.71 ಕೋಟಿ ರೂಪಾಯಿಗಳ ಸಾಲ ಮತ್ತು ಬಡ್ಡಿಯ ಮೊತ್ತವನ್ನು ಮರುಪಾವತಿಸದ ಪ್ರಕರಣದಲ್ಲಿ, ರಾಜ್ಯ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ನಸೀರ್ ಅಹಮದ್ ಅವರನ್ನು ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಮಂಡಳಿಯು (NCLT) ಅಧಿಕೃತವಾಗಿ ‘ದಿವಾಳಿ’ (Bankrupt) ಎಂದು ಘೋಷಿಸಿದೆ. ಈ ಮಹತ್ವದ ತೀರ್ಪಿನಿಂದಾಗಿ ನಸೀರ್ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದಾಗುವ ಭಾರಿ ಸಾಧ್ಯತೆಗಳಿವೆ.
ಸಾಲದ ಹಿನ್ನೆಲೆ ಮತ್ತು ಎನ್ಸಿಎಲ್ಟಿ ಆದೇಶ
ನಸೀರ್ ಅಹಮದ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಾಗೂ ಅವರ ಪತ್ನಿ ನುಝುತ್ ಆಯಿಷಾ ನಸೀರ್ ಮತ್ತು ಪುತ್ರ ಅವೈಜ್ ಅಹಮದ್ ನಿರ್ದೇಶಕರಾಗಿದ್ದ ‘ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್’ ಸಂಸ್ಥೆಯು ಎಸ್ಬಿಐ (SBI), ಕೆನರಾ ಮತ್ತು ಐಡಿಬಿಐ ಬ್ಯಾಂಕ್ಗಳಿಂದ ಸಾವಿರಾರು ಕೋಟಿ ಸಾಲ ಪಡೆದಿತ್ತು. ಈ ಬೃಹತ್ ಮೊತ್ತದ ಸಾಲಕ್ಕೆ ನಸೀರ್ ಮತ್ತು ಅವರ ಕುಟುಂಬದವರೇ ವೈಯಕ್ತಿಕ ಖಾತರಿ (Personal Guarantee) ಒದಗಿಸಿದ್ದರು. ಆದರೆ, ಕಂಪನಿಯು ನಷ್ಟ ಅನುಭವಿಸಿದ ಕಾರಣ ಸಾಲ ಮರುಪಾವತಿಯಾಗಿರಲಿಲ್ಲ. ಬ್ಯಾಂಕ್ಗಳು ಈ ಸಾಲವನ್ನು ಅನುತ್ಪಾದಕ ಆಸ್ತಿ (NPA) ಎಂದು ವರ್ಗೀಕರಿಸಿ, ವಸೂಲಾತಿಗಾಗಿ ಎನ್ಸಿಎಲ್ಟಿ ಮೆಟ್ಟಿಲೇರಿದ್ದವು.

ಸುನಿಲ್ ಕುಮಾರ್ ಅಗರ್ವಾಲ್ (ನ್ಯಾಯಾಂಗ ಸದಸ್ಯ) ಮತ್ತು ರಾಧಾಕೃಷ್ಣ ಶ್ರೀಪಾದ (ತಾಂತ್ರಿಕ ಸದಸ್ಯ) ಅವರಿದ್ದ ಎನ್ಸಿಎಲ್ಟಿಯ ಬೆಂಗಳೂರು ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ, ತಾವು ಬ್ಯಾಂಕ್ಗಳಿಗೆ ನೇರವಾಗಿ ಖಾತರಿ ಒದಗಿಸಿಲ್ಲ, ಹೀಗಾಗಿ ತಮ್ಮ ವಿರುದ್ಧ ದಿವಾಳಿತನ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ ಎಂದು ನಸೀರ್ ವಾದಿಸಿದ್ದರು. ಆದರೆ, ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಪೀಠವು, ನಸೀರ್ ಹಾಗೂ ಅವರ ಕುಟುಂಬದವರನ್ನು ದಿವಾಳಿ ಎಂದು ಘೋಷಿಸಿ ಆದೇಶ ಹೊರಡಿಸಿದೆ. ಮುಂದಿನ ಪ್ರಕ್ರಿಯೆಗಳಿಗಾಗಿ ರವೀಂದ್ರ ಬೆಲೆಯೂರ್ ಅವರನ್ನು ‘ದಿವಾಳಿತನ ಟ್ರಸ್ಟಿ’ಯಾಗಿ ನ್ಯಾಯಮಂಡಳಿ ನೇಮಕ ಮಾಡಿದೆ.
ಶಾಸಕ ಸ್ಥಾನ ಹಾಗೂ ಮತದಾನದ ಹಕ್ಕಿಗೆ ಕುತ್ತು
ದಿವಾಳಿ ಸಂಹಿತೆಯ 140ನೇ ಸೆಕ್ಷನ್ ಹಾಗೂ ಸಂವಿಧಾನದ 191(1)(ಸಿ) ಸೆಕ್ಷನ್ ಪ್ರಕಾರ, ದಿವಾಳಿ ಎಂದು ಘೋಷಿತರಾದ ಯಾವುದೇ ವ್ಯಕ್ತಿಯು ಸರ್ಕಾರಿ ಕರ್ತವ್ಯ ಅಥವಾ ಚುನಾಯಿತ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ. ಕಾನೂನಿನ ಈ ಸ್ಪಷ್ಟ ನಿಯಮಗಳ ಅನ್ವಯ, ನಸೀರ್ ಅಹಮದ್ ಅವರನ್ನು ವಿಧಾನ ಪರಿಷತ್ ಸದಸ್ಯತ್ವದಿಂದ ಕಡ್ಡಾಯವಾಗಿ ಅಮಾನತು ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ, ಅವರು ಭವಿಷ್ಯದಲ್ಲಿ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಹಾಗೂ ತಮ್ಮ ಕನಿಷ್ಠ ಮತದಾನದ ಹಕ್ಕನ್ನೂ ಅವರು ಕಳೆದುಕೊಳ್ಳಲಿದ್ದಾರೆ.
ಆಸ್ತಿ ಮುಟ್ಟುಗೋಲು ಮತ್ತು ನಿರ್ಬಂಧಗಳು
ನ್ಯಾಯಮಂಡಳಿಯ ಆದೇಶದಂತೆ, ನಸೀರ್ ಮತ್ತು ಅವರ ಕುಟುಂಬದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಂಪೂರ್ಣ ಅಧಿಕಾರವನ್ನು ನೇಮಕಗೊಂಡಿರುವ ಟ್ರಸ್ಟಿಗೆ ನೀಡಲಾಗಿದೆ. ಆಸ್ತಿಯ ಮೌಲ್ಯದ ಜೊತೆಗೆ ಸಾಲದ ಉಳಿಕೆ ಮೊತ್ತವನ್ನು ವಸೂಲಿ ಮಾಡಲು ಟ್ರಸ್ಟಿ ಕ್ರಮಕೈಗೊಳ್ಳಲಿದ್ದಾರೆ.


Leave a Reply