ಹಳೇ ಚಾಳಿ ಮುಂದುವರಿಸಿದ ಮುತ್ತಪ್ಪ ರೈ ಪುತ್ರ: ಏರ್‌ಪೋರ್ಟ್ ರಸ್ತೆಯಲ್ಲಿ ಪುಂಡಾಟ, ವಿಡಿಯೋ ವೈರಲ್!

ಬೆಂಗಳೂರು: ಮೃತರಾದ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಒಡೆತನದ ಐಷಾರಾಮಿ ಲ್ಯಾಂಬೋರ್ಗಿನಿ (Lamborghini) ಕಾರು ರಾಜಧಾನಿಯ ರಸ್ತೆಯಲ್ಲಿ ಮತ್ತೊಮ್ಮೆ ಭೀಕರ ಪುಂಡಾಟ ನಡೆಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Airport Road) ಹೆದ್ದಾರಿಯಲ್ಲಿ ಅತ್ಯಂತ ಅತಿವೇಗವಾಗಿ ಚಾಲನೆ ಮಾಡುವುದರ ಜೊತೆಗೆ, ಮಾಡಿಫೈಡ್ ಸೈಲೆನ್ಸರ್‌ನಿಂದ ಕರ್ಕಶ ಶಬ್ದ ಮಾಡುತ್ತಾ, ಬೆಂಕಿ ಉಗುಳುವಂತೆ ಅಜಾಗರೂಕತೆಯಿಂದ ಡ್ರೈವ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

KA 05 NR 0009 ನಂಬರ್‌ನ ಈ ಲ್ಯಾಂಬೋರ್ಗಿನಿ ಕಾರು ಈ ಹಿಂದೆಯೂ ಇಂತಹದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿತ್ತು. ಕಳೆದ ಮಾರ್ಚ್ 21ರಂದು ನಗರದ ಕುಂಬ್ಳೆ ಸರ್ಕಲ್ ಹಾಗೂ ಕಬ್ಬನ್ ರಸ್ತೆಯಲ್ಲಿ ಇದೇ ಕಾರಿನಲ್ಲಿ ಭೀಕರವಾಗಿ ‘ಡ್ರಿಫ್ಟಿಂಗ್’ (Drifting) ಮಾಡಲಾಗಿತ್ತು. ಆಗ ಮೊದಲಿಗೆ “ಕಾರಿನಲ್ಲಿ ನಾನಿರಲಿಲ್ಲ” ಎಂದು ರಿಕ್ಕಿ ರೈ ವಾದಿಸಿದ್ದರಾದರೂ, ಕಬ್ಬನ್ ಪಾರ್ಕ್ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಅವರೇ ಕಾರು ಓಡಿಸಿದ್ದು ಪತ್ತೆಯಾಗಿತ್ತು. ಆಗ ಕೋರ್ಟ್ ಮುಂದೆ ದಂಡ ಕಟ್ಟಿ ಬಂದಿದ್ದ ರಿಕ್ಕಿ ರೈ ಕಾರು, ಈಗ ಮತ್ತೆ ಕಾನೂನು ಉಲ್ಲಂಘಿಸಿದೆ. ವೈರಲ್ ವಿಡಿಯೋ ಆಧರಿಸಿ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಸದ್ಯದಲ್ಲೇ ಚಾಲಕನನ್ನು ಪತ್ತೆಹಚ್ಚಿ ಕರ್ನಾಟಕ ಮೋಟಾರು ವಾಹನ ಕಾಯ್ದೆ-1988 (KMV Act) ಅಡಿಯಲ್ಲಿ ಕಠಿಣ ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.

Leave a Reply

Your email address will not be published. Required fields are marked *