ಡೆಹ್ರಾಡೂನ್: ಭಾರತೀಯ ಸೇನಾ ಅಕಾಡೆಮಿಯ (IMA) 94 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಅಪರೂಪದ ಹಾಗೂ ಐತಿಹಾಸಿಕ ಕ್ಷಣವೊಂದು ನಿರ್ಮಾಣವಾಗಿದೆ. ಡೆಹ್ರಾಡೂನ್‌ನ ಐಎಂಎಯಲ್ಲಿ ಶನಿವಾರ ನಡೆದ ‘ಸ್ಪ್ರಿಂಗ್ ಟರ್ಮ್ 2026 ಪಾಸಿಂಗ್ ಔಟ್ ಪರೇಡ್’ (Passing Out Parade) ನಲ್ಲಿ ಒಂಬತ್ತು ಮಹಿಳಾ ಕೆಡೆಟ್‌ಗಳು ಸೇರಿದಂತೆ ಒಟ್ಟು 515 ಕೆಡೆಟ್‌ಗಳು ಅಧಿಕೃತವಾಗಿ ಭಾರತೀಯ ಸೇನೆಗೆ ಸೇರ್ಪಡೆಗೊಂಡರು.
ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರತಿಷ್ಠಿತ ಪಾಸಿಂಗ್ ಔಟ್ ಪರೇಡ್ ಅನ್ನು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು.

ಸೇನೆಗೆ ಮಹಿಳಾ ಕೆಡೆಟ್‌ಗಳ ಸೇರ್ಪಡೆ ಒಂದು ‘ಮೈಲಿಗಲ್ಲು’
ಈ ಐತಿಹಾಸಿಕ ಕ್ಷಣವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, “ಐಎಂಎ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 9 ಮಹಿಳಾ ಕೆಡೆಟ್‌ಗಳು ತರಬೇತಿ ಪೂರ್ಣಗೊಳಿಸಿ ಸೇನೆಗೆ ಸೇರ್ಪಡೆಯಾಗುತ್ತಿರುವುದು ಒಂದು ಮಹತ್ವದ ಮೈಲಿಗಲ್ಲು. ಇದು ಕೇವಲ ರಕ್ಷಣಾ ಪಡೆಗಳ ಇತಿಹಾಸದಲ್ಲಿ ಮಾತ್ರವಲ್ಲ, ಮಹಿಳಾ ನೇತೃತ್ವದ ಅಭಿವೃದ್ಧಿಗೆ ಅತ್ಯುತ್ತಮ ಉದಾಹರಣೆಯಾಗಿದೆ” ಎಂದು ಬಣ್ಣಿಸಿದರು. ನೂತನವಾಗಿ ಸೇರ್ಪಡೆಗೊಂಡ ಅಧಿಕಾರಿಗಳು ತಮ್ಮ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಅಸ್ತ್ರವನ್ನಾಗಿಸಿಕೊಂಡು ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಅವರು ಕರೆ ನೀಡಿದರು.
34 ವಿದೇಶಿ ಕೆಡೆಟ್‌ಗಳು ಸೇರಿದಂತೆ 515 ಅಧಿಕಾರಿಗಳ ಸೇರ್ಪಡೆ
ಡ್ರಿಲ್ ಸ್ಕ್ವೇರ್‌ನಲ್ಲಿ ನಡೆದ ಈ ಅದ್ಧೂರಿ ಪಾಸಿಂಗ್ ಔಟ್ ಪರೇಡ್‌ನಲ್ಲಿ 16 ಮಿತ್ರ ರಾಷ್ಟ್ರಗಳ 34 ಕೆಡೆಟ್‌ಗಳು ಸೇರಿದಂತೆ ಒಟ್ಟು 515 ಕೆಡೆಟ್‌ಗಳು ತರಬೇತಿ ಪೂರ್ಣಗೊಳಿಸಿದರು. ಕಠಿಣ ತರಬೇತಿಯ ಬಳಿಕ ‘ಅಂತಿಮ ಹೆಜ್ಜೆ’ (Antim Pag) ಇಡುವ ಮೂಲಕ ಕೆಡೆಟ್‌ಗಳು ಅಧಿಕೃತವಾಗಿ ಸೇನಾ ಅಧಿಕಾರಿಗಳಾಗಿ ರೂಪಾಂತರಗೊಳ್ಳುವ ಭಾವುಕ ಹಾಗೂ ಹೆಮ್ಮೆಯ ಕ್ಷಣಗಳಿಗೆ ಈ ಪರೇಡ್ ಸಾಕ್ಷಿಯಾಯಿತು. ಈ ಪ್ರತಿಷ್ಠಿತ ಸಮಾರಂಭದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಗಣ್ಯರು ಹಾಗೂ ಸೇನಾ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.


Leave a Reply