ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ನೂತನ ಚೆನ್ನೈ ಎಕ್ಸ್‌ಪ್ರೆಸ್ (Chennai Expressway) ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ಸ್ಥಳದಲ್ಲೇ ಅತ್ಯಂತ ಧೋರಣವಾಗಿ ಸಾವನ್ನಪ್ಪಿದ್ದಾರೆ. ಹೊಸಕೋಟೆ ತಾಲೂಕಿನ ದೊಡ್ಡ ಹುಲ್ಲೂರು ಗ್ರಾಮದ ಬಳಿ ಈ ದುರಂತ ನಡೆದಿದೆ. ಚಾಲಕನ ವಿಪರೀತ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಈ ಘೋರ ಅಪಘಾತಕ್ಕೆ ನೇರ ಕಾರಣ ಎಂದು ಹೇಳಲಾಗಿದೆ.
ವೇಗವಾಗಿ ಬಂದ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಭೀಕರತೆಗೆ ಬೆಂಜ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗಿದ್ದ ಯುವತಿ ತೀವ್ರ ರಕ್ತಸ್ರಾವದಿಂದಾಗಿ ಜಾಗದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸದ್ಯ ಮೃತ ಯುವತಿಯ ಗುರುತು ಇನ್ನು ಪತ್ತೆಯಾಗಿಲ್ಲ.
ಅಪಘಾತ ಸಂಭವಿಸುತ್ತಿದ್ದಂತೆ ತೀವ್ರ ಆತಂಕಗೊಂಡ ಕಾರು ಚಾಲಕ, ಮಾನವೀಯತೆಯನ್ನೂ ಮರೆತು ಯುವತಿಯ ಶವವನ್ನು ಕಾರಿನಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಹೊಸಕೋಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಗುರುತು ಪತ್ತೆ ಹಚ್ಚಲು ಹಾಗೂ ಪರಾರಿಯಾಗಿರುವ ಚಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Leave a Reply