ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತ್ಯಂತ ಕೈಗೆಟುಕುವ ದರದಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರಿಗೆ ಆಸರೆಯಾಗಿದ್ದ ಬಿಡಿಎ 1 BHK ಫ್ಲ್ಯಾಟ್‌ಗಳ ಯುಗ ಇನ್ಮುಂದೆ ಮುಕ್ತಾಯವಾಗಲಿದೆ. ಇನ್ಮೇಲೆ ನಗರದಲ್ಲಿ ಹೊಸದಾಗಿ ಯಾವುದೇ 1 BHK ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸದಿರಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಿರ್ಧರಿಸಿದೆ. ಈ ಮೂಲಕ ಬಜೆಟ್ ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಬಿಡಿಎ ಅಧಿಕೃತವಾಗಿ ಎಳ್ಳು-ನೀರು ಬಿಟ್ಟಿದೆ.
1 BHK ಕ್ಲೋಸ್ – 2 ಮತ್ತು 3 BHKಗೆ ಮಾತ್ರ ಬೇಡಿಕೆ!
ರಾಜಧಾನಿಯ ಹೊರವಲಯದಲ್ಲಿ ಬಿಡಿಎ ಈ ಹಿಂದೆ ಸಾವಿರಾರು ಫ್ಲ್ಯಾಟ್‌ಗಳನ್ನು ನಿರ್ಮಿಸಿ ಮಾರಾಟಕ್ಕಿಟ್ಟಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರು 1 BHK ಮನೆಗಳ ಖರೀದಿಗೆ ಒಲವು ತೋರುತ್ತಿಲ್ಲ. ಈಗಾಗಲೇ ನಿರ್ಮಾಣ ಹಂತ ಮುಗಿದಿರುವ ನೂರಾರು 1 BHK ಫ್ಲ್ಯಾಟ್‌ಗಳು ವರ್ಷಗಳೇ ಕಳೆದರೂ ಮಾರಾಟವಾಗದೆ ಉಳಿದುಕೊಂಡಿವೆ. ಮತ್ತೊಂದೆಡೆ, ಗ್ರಾಹಕರು ಬಿಡಿಎ ನಿರ್ಮಿತ 2 BHK ಮತ್ತು 3 BHK ಫ್ಲ್ಯಾಟ್‌ಗಳನ್ನು ಖರೀದಿಸಲು ಮುಗಿಬೀಳುತ್ತಿದ್ದು, ಇವುಗಳಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.
ಎಲ್ಲೆಲ್ಲಿವೆ ಬಿಡಿಎ ಫ್ಲ್ಯಾಟ್‌ಗಳು?
ಬೆಂಗಳೂರಿನ ಹೊರವಲಯದ ಪ್ರಮುಖ ಪ್ರದೇಶಗಳಾದ:
-
ಕೊಮ್ಮಘಟ್ಟ
-
ಆಲೂರು
-
ಗುಂಜೂರು
-
ಕೋನಾದಾಸನಪುರ
-
ವಲಗೆರೆಹಳ್ಳಿ
-
ಹುಣ್ಣಿಗೆರೆ ಸೇರಿದಂತೆ ಹಲವೆಡೆ ಬಿಡಿಎ ಬೃಹತ್ ಅಪಾರ್ಟ್‌ಮೆಂಟ್ ಸಮುಚ್ಚಯಗಳನ್ನು ನಿರ್ಮಿಸಿದೆ. ಈ ಭಾಗಗಳಲ್ಲಿ 2 ಮತ್ತು 3 BHK ಫ್ಲ್ಯಾಟ್‌ಗಳ ಅತ್ಯುತ್ತಮ ಗುಣಮಟ್ಟ ಹಾಗೂ ಬಜೆಟ್ ದರಕ್ಕೆ ಗ್ರಾಹಕರು ಫಿದಾ ಆಗಿದ್ದಾರೆ. ಆದರೆ ಅದೇ ಆವರಣದಲ್ಲಿರುವ 1 BHK ಫ್ಲ್ಯಾಟ್‌ಗಳಿಗೆ ಮಾತ್ರ ಸೇಲ್ ಭಾಗ್ಯ ಸಿಗುತ್ತಿಲ್ಲ.
ಖರೀದಿದಾರರಿಲ್ಲದೆ ಕೋಟ್ಯಂತರ ರೂಪಾಯಿ ಮೌಲ್ಯದ 1 BHK ಆಸ್ತಿಗಳು ಪಾಳುಬೀಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಡಿಎ ಮಂಡಳಿ, ಇನ್ಮುಂದೆ ಕೇವಲ 2 ಮತ್ತು 3 BHK ಫ್ಲ್ಯಾಟ್‌ಗಳ ಯೋಜನೆಗಳತ್ತ ಮಾತ್ರ ಗಮನ ಹರಿಸಲು ಗ್ರೀನ್ ಸಿಗ್ನಲ್ ನೀಡಿದೆ. ಈ ನಿರ್ಧಾರದಿಂದಾಗಿ ಪ್ರಾಧಿಕಾರಕ್ಕೆ ನಷ್ಟ ತಪ್ಪಲಿದೆಯಾದರೂ, ಸಣ್ಣ ಬಜೆಟ್‌ನಲ್ಲಿ ರಾಜಧಾನಿಯಲ್ಲಿ ಸ್ವಂತ ಮನೆ ಹೊಂದುವ ಹಂಬಲದಲ್ಲಿದ್ದ ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಮಾತ್ರ ತೀವ್ರ ನಿರಾಸೆಯಾಗಿದೆ.

Leave a Reply