Shigella Infection | ಮಳೆಗಾಲದ ಆರಂಭದಲ್ಲೇ ಗಡಿನಾಡಿಗೆ ನಡುಕ ತಂದ ಶಿಗೆಲ್ಲಾ: ಏನಿದರ ಲಕ್ಷಣಗಳು? ತಡೆಗಟ್ಟುವುದು ಹೇಗೆ?

ಹಂಚಿಕೊಳ್ಳಿ

ತಿರುವನಂತಪುರಂ: ಕೇರಳದಲ್ಲಿ ಮಳೆಗಾಲದ ಆರಂಭದ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳ ಆರ್ಭಟ ಜೋರಾಗಿದೆ. ‘ಶಿಗೆಲ್ಲಾ’ ಎಂಬ ಅಪಾಯಕಾರಿ ಬ್ಯಾಕ್ಟೀರಿಯಾದಿಂದ ಹರಡುವ ಅತಿಸಾರ ಸಂಬಂಧಿತ ಸೋಂಕು ‘ಶಿಗೆಲ್ಲೋಸಿಸ್’ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೇಗವಾಗಿ ಹರಡುತ್ತಿದೆ. ಪ್ರಸ್ತುತ ಕೇರಳದಲ್ಲಿ 85 ಕನ್ಫರ್ಮ್ ಪ್ರಕರಣಗಳು ಹಾಗೂ 70ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ದಾಖಲಾಗಿವೆ. ವಿಶೇಷವಾಗಿ ವಯನಾಡು, ಕೋಝಿಕ್ಕೋಡ್, ಅಲಪ್ಪುಝಾ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಈ ಸೋಂಕಿನ ಬಾಹುಳ್ಯ ಹೆಚ್ಚಾಗಿದೆ. ವಯನಾಡಿನ ಮಾರ್ಬಾಸೆಲಿಯೋಸ್ ಶಾಲೆಯ ಇಬ್ಬರು ಮಕ್ಕಳಲ್ಲಿ ಈ ಸೋಂಕು ಪತ್ತೆಯಾಗಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಆರೋಗ್ಯವಂತ ವಯಸ್ಕರಲ್ಲಿ ಈ ಸೋಂಕು ತಾನಾಗಿಯೇ ಹತೋಟಿಗೆ ಬಂದರೂ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ಅತ್ಯಂತ ಅಪಾಯಕಾರಿಯಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ವೃದ್ಧರ ಮೇಲೂ ಇದು ತೀವ್ರ ಪರಿಣಾಮ ಬೀರಲಿದ್ದು, ಈ ವರ್ಷ ಈಗಾಗಲೇ ಇಬ್ಬರು ಅಪ್ರಾಪ್ತ ಮಕ್ಕಳು ಈ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ಶಿಗೆಲ್ಲೋಸಿಸ್ ಸೋಂಕಿನ ಪ್ರಮುಖ ಲಕ್ಷಣಗಳು (Symptoms):

ಈ ಬ್ಯಾಕ್ಟೀರಿಯಾ ದೇಹ ಸೇರಿದ 1 ಅಥವಾ 2 ದಿನಗಳ ಒಳಗೆ ಲಕ್ಷಣಗಳು ಬಹಿರಂಗಗೊಳ್ಳುತ್ತವೆ.

  • ತೀವ್ರ ಜ್ವರ ಮತ್ತು ಹೊಟ್ಟೆನೋವು

  • ನಿರಂತರ ಅತಿಸಾರ (Diarrhea) ಮತ್ತು ವಾಂತಿ

  • ಮಲದಲ್ಲಿ ರಕ್ತ ಅಥವಾ ಲೋಳೆ ಬೀಳುವುದು

  • ವಾಕರಿಕೆ ಹಾಗೂ ಪದೇ ಪದೇ ಶೌಚಕ್ಕೆ ಹೋಗಬೇಕು ಎನಿಸುವುದು

ಸೋಂಕು ತಡೆಗಟ್ಟಲು ಏನು ಮಾಡಬೇಕು? (Prevention Measures):

ಇದು ಕಲುಷಿತ ನೀರು, ಆಹಾರ ಮತ್ತು ಅಸ್ವಚ್ಛತೆಯಿಂದ ಹರಡುವುದರಿಂದ ಸಾರ್ವಜನಿಕರು ಕೆಳಗಿನ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಬೇಕು:

  1. ಕೈಗಳ ಸ್ವಚ್ಛತೆ: ಊಟ ಮಾಡುವ ಮುನ್ನ ಮತ್ತು ಶೌಚಾಲಯ ಬಳಕೆ ಮಾಡಿದ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈಗಳನ್ನು ಕಡ್ಡಾಯವಾಗಿ ತೊಳೆಯಬೇಕು.

  2. ಕುದಿಸಿದ ನೀರು: ಮಳೆಗಾಲದಲ್ಲಿ ಕಲುಷಿತ ನೀರು ಪೂರೈಕೆಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಕೇವಲ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು.

  3. ತಾಜಾ ಆಹಾರ: ಹಳಸಿದ ಆಹಾರ ಅಥವಾ ಬೇಯಿಸದ ಹಸಿ ಆಹಾರ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಹೋಟೆಲ್ ಹಾಗೂ ಬೀದಿಬದಿಯ ಆಹಾರಕ್ಕಿಂತ ಮನೆಯಲ್ಲೇ ತಯಾರಿಸಿದ ಬಿಸಿ ಆಹಾರ ಸೂಕ್ತ.

  4. ಪ್ರತ್ಯೇಕತೆ: ಮನೆಯಲ್ಲಿ ಯಾರಿಗಾದರೂ ಸೋಂಕು ತಗುಲಿದ್ದರೆ ಅವರ ಬಟ್ಟೆ, ಹಾಸಿಗೆ ಹಾಗೂ ಪಾತ್ರೆಗಳನ್ನು ಪ್ರತ್ಯೇಕವಾಗಿ ಇಡಬೇಕು. ಲಕ್ಷಣಗಳು ಗುಣವಾದ ನಂತರವೂ ಕನಿಷ್ಠ 2 ವಾರಗಳ ಕಾಲ ಸಾರ್ವಜನಿಕ ಆಹಾರ ವಿತರಣೆ ಅಥವಾ ಹೋಟೆಲ್ ಕೆಲಸಗಳಿಂದ ದೂರವಿರಬೇಕು.

Leave a Reply

Your email address will not be published. Required fields are marked *

Advertisement


This will close in 3 seconds