ಬೆಂಗಳೂರು: ಮನೆ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆಯಲ್ಲಿ ಇನ್ಮುಂದೆ ಪಾರದರ್ಶಕತೆ ತರಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ರಾಜ್ಯಾದ್ಯಂತ ಸಾವಿರಾರು ಮೃತಪಟ್ಟ ಮಹಿಳೆಯರು ಹಾಗೂ ಆದಾಯ ತೆರಿಗೆ ಪಾವತಿದಾರರ ಖಾತೆಗಳಿಗೆ ನಿಯಮಬಾಹಿರವಾಗಿ ಹಣ ಸಂದಾಯವಾಗಿ ಸರ್ಕಾರದ ಖಜಾನೆಗೆ ಕೋಟಿ ಕೋಟಿ ರೂಪಾಯಿ ನಷ್ಟ ಉಂಟಾಗುತ್ತಿರುವುದನ್ನು ತಡೆಯಲು ‘ಬಯೋಮೆಟ್ರಿಕ್ ಕಡ್ಡಾಯ’ (Biometric Compulsory) ಮಾಡುವ ಹೊಸ ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.
ಹೆಬ್ಬೆಟ್ಟು ಗುರುತು ನೀಡದಿದ್ದರೆ ಜಮೆಯಾಗಲ್ಲ 2,000 ರೂ. ಅಮೌಂಟ್!
ಮೂಲಗಳ ಪ್ರಕಾರ, ಸರ್ಕಾರ ಯೋಜನೆಯ ದುರುಪಯೋಗವನ್ನು ತಡೆಗಟ್ಟಲು ತಾಂತ್ರಿಕ ನಿಯಂತ್ರಣ ಹೇರಲು ನಿರ್ಧರಿಸಿದೆ. ಇದರ ಭಾಗವಾಗಿ ಪ್ರತಿ ಫಲಾನುಭವಿ ಮಹಿಳೆಯೂ ತಮ್ಮ ಬಯೋಮೆಟ್ರಿಕ್ (ಹೆಬ್ಬೆಟ್ಟು ಅಥವಾ ಕಣ್ಣಿನ ಐರಿಸ್ ಗುರುತು) ಅನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಬೇಕಾಗುತ್ತದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಈ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ಅಂತಹ ಮಹಿಳೆಯರ ಖಾತೆಗೆ ಬರುವ ಮಾಸಿಕ 2,000 ರೂಪಾಯಿ ಹಣವನ್ನು ತಕ್ಷಣವೇ ತಡೆಹಿಡಿಯಲಾಗುತ್ತದೆ ಎನ್ನಲಾಗಿದೆ.
ಬೆಂಗಳೂರು ಒನ್, ಗ್ರಾಮ ಒನ್ಗಳಲ್ಲಿ ಅವಕಾಶ – ಆಧಾರ್ ಕಾರ್ಡ್ ಕಡ್ಡಾಯ:
ಫಲಾನುಭವಿಗಳು ಈ ಹೊಸ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಿಕೊಳ್ಳಲು ಸರ್ಕಾರವು ಸ್ಥಳೀಯ ಸೇವಾ ಕೇಂದ್ರಗಳಾದ ಬೆಂಗಳೂರು ಒನ್ (Bengaluru One), ಕರ್ನಾಟಕ ಒನ್ ಹಾಗೂ ಗ್ರಾಮ ಒನ್ (Grama One) ಕೇಂದ್ರಗಳಲ್ಲಿ ವಿಶೇಷ ಅವಕಾಶ ಕಲ್ಪಿಸಿಕೊಡುವ ಸಾಧ್ಯತೆ ಇದೆ.
-
ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ (Aadhaar Card) ಮತ್ತು ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಈ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಹೆಬ್ಬೆಟ್ಟು ಗುರುತು ನೀಡಬೇಕಾಗುತ್ತದೆ.
-
ಈ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಮಾಡಿಸಲು ಸೇವಾ ಕೇಂದ್ರಗಳಿಗೆ ಸರ್ಕಾರವೇ ಒಂದು ನಿರ್ದಿಷ್ಟ ಸೇವಾ ಶುಲ್ಕವನ್ನು (Service Fee) ಫಿಕ್ಸ್ ಮಾಡುವ ಸಾಧ್ಯತೆಯೂ ದಟ್ಟವಾಗಿದೆ.
-
ಮುಂದಿನ ತಿಂಗಳಿಂದಲೇ ಹೊಸ ನಿಯಮ ಜಾರಿ?
ಇಲಾಖೆಯ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಈಗಾಗಲೇ ಈ ಕುರಿತು ಪ್ರಾಥಮಿಕ ಚರ್ಚೆಗಳು ಮುಗಿದಿದ್ದು, ತಾಂತ್ರಿಕ ತಂತ್ರಾಂಶ ಸಿದ್ಧಪಡಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ಮುಂದಿನ ತಿಂಗಳಿಂದಲೇ (ಜುಲೈ 2026) ಈ ಬಯೋಮೆಟ್ರಿಕ್ ಕಡ್ಡಾಯ ನಿಯಮ ರಾಜ್ಯಾದ್ಯಂತ ಜಾರಿಗೆ ಬರುವ ಸಾಧ್ಯತೆ ಇದೆ. ಸತ್ತವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹಣ ಲೂಟಿ ಮಾಡುತ್ತಿದ್ದ ಖದೀಮರಿಗೆ ಹಾಗೂ ತೆರಿಗೆ ಪಾವತಿಸುತ್ತಿದ್ದರೂ ಯೋಜನೆಯ ಲಾಭ ಪಡೆಯುತ್ತಿದ್ದ ಅನರ್ಹರಿಗೆ ಈ ನಿಯಮದ ಮೂಲಕ ಸರ್ಕಾರ ಸಿಂಹಸ್ವಪ್ನವಾಗಲಿದ್ದು, ನಿಜವಾದ ಬಡ ಅರ್ಹ ಮಹಿಳೆಯರಿಗೆ ಮಾತ್ರ ಇನ್ಮುಂದೆ ಹಣ ಸಿಗುವಂತಾಗಲಿದೆ.

Leave a Reply