ODI | ಆಸ್ಟ್ರೇಲಿಯಾ ವಿರುದ್ಧ 21 ವರ್ಷಗಳ ಬಳಿಕ ಬಾಂಗ್ಲಾದೇಶಕ್ಕೆ ಐತಿಹಾಸಿಕ ಜಯ!

ಬರೋಬ್ಬರಿ ಎರಡು ದಶಕಗಳ ಸುದೀರ್ಘ ಕಾಯುವಿಕೆಯ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶ ಐತಿಹಾಸಿಕ ಜಯ ಸಾಧಿಸಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಜೋಶ್ ಇಂಗ್ಲಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದರು. ಆದರೆ ಅವರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಬಾಂಗ್ಲಾ ಪಡೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಕಾಂಗರೂ ಪಡೆಯನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮುನ್ನ 2005 ರಲ್ಲಿ ಬಾಂಗ್ಲಾದೇಶ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿತ್ತು. ಆ ಬಳಿಕ ಒಮ್ಮೆಯೂ ಆಸ್ಟ್ರೇಲಿಯಾವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಇದೀಗ 21 ವರ್ಷಗಳ ಬಳಿಕ ಗೆಲುವಿನ ನಗೆ ಬೀರುವ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಬಾಂಗ್ಲಾ ಅಬ್ಬರ

ಮೊದಲು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡವು ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಅತ್ಯುತ್ತಮ ಮೊತ್ತ ಕಲೆಹಾಕಿತು. ಆರಂಭಿಕ ಆಟಗಾರ ತಂಝೀದ್ ಹಸನ್ 54 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜ್ಮುಲ್ ಹೊಸೇನ್ ಶಾಂತೊ 67 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಮೊಸದ್ದೀಕ್ ಹೊಸೇನ್ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಿದರು. ಕೇವಲ 70 ಎಸೆತಗಳನ್ನು ಎದುರಿಸಿದ ಅವರು 3 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಅಜೇಯ 86 ರನ್ ಸಿಡಿಸಿದರು. ಈ ಸಾಹಸದ ನೆರವಿನಿಂದ ಬಾಂಗ್ಲಾದೇಶ ತಂಡವು ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 284 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು.

ಮಳೆ ಅಡ್ಡಿ ಮತ್ತು ಬೌಲರ್‌ಗಳ ಪ್ರಾಬಲ್ಯ

ಗೆಲ್ಲಲು 285 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಬಾಂಗ್ಲಾ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ವೇಗಿ ತಸ್ಕಿನ್ ಅಹ್ಮದ್ ಎಸೆದ ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಮ್ಯಾಥ್ಯೂ ಶಾರ್ಟ್ (0) ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಮಾರ್ನಸ್ ಲಾಬುಶೇನ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು, ಹಾಗೂ ನಾಯಕ ಜೋಶ್ ಇಂಗ್ಲಿಸ್ 19 ರನ್‌ಗಳಿಗೆ ಆಟ ಮುಗಿಸಿದರು. ಈ ಹಂತದಲ್ಲಿ ಜೊತೆಯಾದ ಅಲೆಕ್ಸ್ ಕ್ಯಾರಿ (47 ರನ್) ಮತ್ತು ಕ್ಯಾಮರೋನ್ ಗ್ರೀನ್ (ಅಜೇಯ 52 ರನ್) ತಂಡವನ್ನು ಆಧರಿಸುವ ಯತ್ನ ಮಾಡಿದರಾದರೂ, ಬಾಂಗ್ಲಾ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 42.2 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಸಂದರ್ಭದಲ್ಲಿ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಿ, ಡಕ್-ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಯಿತು. ಇದರ ಆಧಾರದ ಮೇಲೆ ಬಾಂಗ್ಲಾದೇಶ ತಂಡವನ್ನು 86 ರನ್‌ಗಳ ಜಯಶಾಲಿ ಎಂದು ಘೋಷಿಸಲಾಯಿತು.

ಉಭಯ ತಂಡಗಳ ಆಟಗಾರರ ವಿವರ

ಗೆಲುವಿನ ರೂವಾರಿಗಳಾದ ಬಾಂಗ್ಲಾದೇಶ ತಂಡದಲ್ಲಿ ತಂಝೀದ್ ಹಸನ್ ತಮೀಮ್, ಸೈಫ್ ಹಸನ್, ನಜ್ಮುಲ್ ಹೊಸೇನ್ ಶಾಂತೊ, ವಿಕೆಟ್ ಕೀಪರ್ ಲಿಟ್ಟನ್ ದಾಸ್, ತೌಹಿದ್ ಹೃದೋಯ್, ಮೊಸದ್ದೀಕ್ ಹೊಸೇನ್, ನಾಯಕ ಮೆಹಿದಿ ಹಸನ್ ಮಿರಾಝ್, ತನ್ವೀರ್ ಇಸ್ಲಾಂ, ತಸ್ಕಿನ್ ಅಹ್ಮದ್, ಮುಸ್ತಫಿಝುರ್ ರೆಹಮಾನ್ ಹಾಗೂ ನಹಿದ್ ರಾಣಾ ಕಣಕ್ಕಿಳಿದಿದ್ದರು. 

ಇತ್ತ ಆಸ್ಟ್ರೇಲಿಯಾ ತಂಡವನ್ನು ಮ್ಯಾಥ್ಯೂ ಶಾರ್ಟ್, ನಾಯಕ ಜೋಶ್ ಇಂಗ್ಲಿಸ್, ಕೂಪರ್ ಕೊನೊಲಿ, ಮಾರ್ನಸ್ ಲಾಬುಶೇನ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಮ್ಯಾಟ್ ರೆನ್ಶಾ, ಲಿಯಾಮ್ ಸ್ಕಾಟ್, ಆ್ಯಡಂ ಝಂಪಾ, ನಾಥನ್ ಎಲ್ಲಿಸ್ ಹಾಗೂ ಕ್ಸೇವಿಯರ್ ಬಾರ್ಟ್ಲೆಟ್ ಪ್ರತಿನಿಧಿಸಿದ್ದರು.

Leave a Reply

Your email address will not be published. Required fields are marked *