ಬೆಂಗಳೂರಿನಲ್ಲಿ ಮತ್ತೊಮ್ಮೆ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡ ಅಗ್ರಹಾರ ಬಳಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್ಗಳನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.
ಪರವಾನಗಿ ಇಲ್ಲದೆ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಅವಲಹಳ್ಳಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿಯ ಮೇರೆಗೆ ದಿಢೀರ್ ದಾಳಿ ನಡೆಸಿದಾಗ ಕಾಡ ಅಗ್ರಹಾರದ ನಿವಾಸಿ ವೆಂಕಟರಾಮ ರೆಡ್ಡಿ ಎಂಬಾತನ ಬಳಿ ಈ ಸ್ಫೋಟಕಗಳು ಪತ್ತೆಯಾಗಿವೆ. ಒಟ್ಟು 50 ಡಿಟೋನೇಟರ್ ಕಡ್ಡಿಗಳು ಹಾಗೂ 225 ಜಿಲೆಟಿನ್ ಕಡ್ಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಜಮೀನಿನಲ್ಲಿರುವ ಬಂಡೆಗಳನ್ನು ಒಡೆಯಲು ಈ ಸ್ಫೋಟಕಗಳನ್ನು ತರಲಾಗಿತ್ತು ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಆದರೆ, ಯಾವುದೇ ಪರವಾನಗಿ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳನ್ನು ದಾಸ್ತಾನು ಮಾಡಿದ್ದೇಕೆ ಎಂಬ ಬಗ್ಗೆ ಅವಲಹಳ್ಳಿ ಠಾಣೆ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.
ಕೇವಲ ಬಂಡೆ ಹೊಡೆಯಲು ಮಾತ್ರ ಈ ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಲಾಗಿತ್ತೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ದುರುದ್ದೇಶವಿದೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಯ ವಿರುದ್ಧ 1884 ರ ಸ್ಫೋಟಕಗಳ ಕಾಯಿದೆ (Explosives Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಬಳಿಯ ರಸ್ತೆಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು ಭದ್ರತಾ ದೃಷ್ಟಿಯಿಂದ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆ ಪ್ರಕರಣದ ತನಿಖೆ ಮುಗಿಯುವ ಮುನ್ನವೇ ಈಗ ನಗರದ ಹೊರವಲಯದಲ್ಲಿ ಮತ್ತೆ ಅದೇ ಮಾದರಿಯ ಸ್ಫೋಟಕಗಳು ಬೃಹತ್ ಪ್ರಮಾಣದಲ್ಲಿ ಸಿಕ್ಕಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.

Leave a Reply