ಸೋಷಿಯಲ್ ಮೀಡಿಯಾ ಯುಗದಲ್ಲಿ 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಸೃಷ್ಟಿಸಿರುವ ಸಂಚಲನ ಅಂತಿಂತಹದ್ದಲ್ಲ. ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಮುನ್ನವೇ ಈತ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ ಈ ಪ್ರತಿಭೆಗೆ ಪ್ರಸಕ್ತ ಐಪಿಎಲ್ ಸೀಸನ್ ಅಕ್ಷರಶಃ ರಾಷ್ಟ್ರೀಯ ತಂಡದ ಬಾಗಿಲು ತೆರೆದಿದೆ. ವಯಸ್ಸಿನ ಆಧಾರದ ಟೂರ್ನಿಗಳಲ್ಲಿ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಈ ಯುವಕ ಈಗ ಇಂಗ್ಲೆಂಡ್ ಮಾಧ್ಯಮಗಳ ಹಾಟ್ ಟಾಪಿಕ್ ಆಗಿದ್ದಾರೆ.
ಐಪಿಎಲ್ನಲ್ಲಿನ ಅಮೋಘ ಪ್ರದರ್ಶನ ಮತ್ತು ರಾಷ್ಟ್ರೀಯ ತಂಡಕ್ಕೆ ಆಯ್ಕೆ
ಕಳೆದ 2026 ರ ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ 237.3 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದ ಸೂರ್ಯವಂಶಿ, ಒಟ್ಟು 776 ರನ್ ಚಚ್ಚಿದ್ದರು. ದಾಖಲೆಯ 72 ಸಿಕ್ಸರ್ಗಳನ್ನು ಸಿಡಿಸಿ ಐದು ವೈಯಕ್ತಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಇವರ ಈ ಅದ್ಭುತ ಪ್ರದರ್ಶನವು ಆಯ್ಕೆಗಾರರು ಅನಿವಾರ್ಯವಾಗಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವಂತೆ ಮಾಡಿತು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇತ್ತೀಚೆಗೆ ಐರ್ಲೆಂಡ್, ಇಂಗ್ಲೆಂಡ್ ಪ್ರವಾಸ ಹಾಗೂ ಏಷ್ಯನ್ ಗೇಮ್ಸ್ಗಾಗಿ ಭಾರತೀಯ ತಂಡವನ್ನು ಪ್ರಕಟಿಸಿದಾಗ, ಈ ಮೂರೂ ತಂಡಗಳಲ್ಲಿ ಸೂರ್ಯವಂಶಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ.
ಇಂಗ್ಲೆಂಡ್ ಮಾಧ್ಯಮಗಳಲ್ಲಿ ಸೂರ್ಯವಂಶಿ ಜಪ
ಜುಲೈ ಒಂದರಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ-20 ಸರಣಿಗೂ ಮುನ್ನವೇ ಇಂಗ್ಲೆಂಡ್ ಮಾಧ್ಯಮಗಳಲ್ಲಿ ಸೂರ್ಯವಂಶಿ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ‘ಸ್ಕೈ ಸ್ಪೋರ್ಟ್ಸ್’ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ, ಇಂಗ್ಲೆಂಡ್ ಮಾಜಿ ನಾಯಕ ಮೈಕ್ ಆಥರ್ಟನ್ ಅವರು ಯುವ ತಾರೆಯ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಟಿ-20 ಸರಣಿಯಲ್ಲಿ ಸೂರ್ಯವಂಶಿ ಅವರ ಆಟವನ್ನು ಕಣ್ತುಂಬಿಕೊಳ್ಳಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು (ECB) ತುದಿಗಾಲಲ್ಲಿ ನಿಂತಿದ್ದು, ಅವರ ಆಗಮನದಿಂದ ಕ್ರೀಡಾಂಗಣದ ಟಿಕೆಟ್ ಮಾರಾಟವೂ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಪತ್ರಕರ್ತೆ ಎಲಿಜಬೆತ್ ಅಮ್ಮನ್ ಅಭಿಪ್ರಾಯಪಟ್ಟಿದ್ದಾರೆ.
ದಿಗ್ಗಜ ಆಟಗಾರರನ್ನೂ ಬೆರಗುಗೊಳಿಸಿದ 15 ರ ಪೋರ
ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ವಿಶ್ವದ ಶ್ರೇಷ್ಠ ಬೌಲರ್ಗಳನ್ನೂ ಲೆಕ್ಕಿಸದೆ ಮೊದಲ ಎಸೆತದಿಂದಲೇ ಸಿಕ್ಸರ್ ಸಿಡಿಸುವ ಸೂರ್ಯವಂಶಿ ಅವರ ಧೈರ್ಯ ಎಲ್ಲರನ್ನು ಬೆರಗುಗೊಳಿಸಿದೆ. ಇಂಗ್ಲೆಂಡ್ನ ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರಂತಹ ಘಟಾನುಘಟಿ ಆಟಗಾರರೂ ಸಹ ಈ ಬಾಲಕನ ಬ್ಯಾಟಿಂಗ್ ವೈಖರಿಗೆ ಬೆರಗಾಗಿದ್ದಾರೆ. ಕೇವಲ ಹದಿನೈದು ವರ್ಷದ ಬಾಲಕನೊಬ್ಬ ಟೂರ್ನಿಯುದ್ದಕ್ಕೂ ಇಷ್ಟೊಂದು ಕರಾರುವಕ್ಕಾಗಿ 72 ಸಿಕ್ಸರ್ಗಳನ್ನು ಬಾರಿಸುವುದು ಸಾಮಾನ್ಯ ವಿಚಾರವಲ್ಲ ಎಂದು ಇಂಗ್ಲೆಂಡ್ನ ಮಾಜಿ ಬ್ಯಾಟರ್ ಮಾರ್ಕ್ ಬುಚರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಎ-ತಂಡದ ತ್ರಿಕೋನ ಸರಣಿ, ಐರ್ಲೆಂಡ್ ಟಿ-20 ಸರಣಿ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಈ ಯುವ ತಾರೆಯ ಆಟವನ್ನು ನೋಡಲು ಇಡೀ ಕ್ರಿಕೆಟ್ ಜಗತ್ತೇ ಕಾತುರದಿಂದ ಕಾಯುತ್ತಿದೆ.

Leave a Reply