ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಟ್ರಾಕ್ಟರ್ ಹಾಗೂ ಕಾರಿನ ನಡುವೆ ನಡೆದ ಈ ರಸ್ತೆ ದುರಂತದಲ್ಲಿ ಶ್ರೀನಿವಾಸ್ (29) ಎಂಬ ದುರ್ದೈವಿ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸಾಗರ ತಾಲೂಕಿನ ಆನಂದಪುರ ಹೋಬಳಿಯ ನೇದರವಳ್ಳಿ- ಜಂಬೆಕೊಪ್ಪ ಕ್ರಾಸ್ ಬಳಿ ಈ ಘಟನೆ ನಡೆದಿದೆ.
ಸ್ಥಳೀಯ ಮೂಲಗಳ ಪ್ರಕಾರ, ಅಪಘಾತದ ವೇಳೆ ಕಾರು ಆನಂದಪುರದಿಂದ ಸಾಗರ ಕಡೆಗೆ ತೆರಳುತ್ತಿತ್ತು. ಇದೇ ಸಮಯದಲ್ಲಿ ಸಾಗರ ಕಡೆಯಿಂದ ಆನಂದಪುರ ಕಡೆಗೆ ಟ್ರಾಕ್ಟರ್ ಒಂದು ಬರುತ್ತಿತ್ತು. ನೇದರವಳ್ಳಿ ಕ್ರಾಸ್ ಬಳಿ ಕಾರು ಚಾಲಕ ಎದುರುಗಡೆ ಬರುತ್ತಿದ್ದ ಟ್ರಾಕ್ಟರ್ ಅನ್ನು ಕಂಡು ತೀವ್ರ ಗಾಬರಿಗೊಂಡಿದ್ದಾನೆ. ಈ ಆತಂಕದಲ್ಲಿ ಆತ ಏಕಾಏಕಿ ಕಾರಿನ ಬ್ರೇಕ್ ಒತ್ತಿದ್ದಾನೆ.
ವೇಗವಾಗಿದ್ದ ಕಾರು ಏಕಾಏಕಿ ಬ್ರೇಕ್ ಹಾಕಿದ ಕಾರಣ ಚಾಲಕನ ನಿಯಂತ್ರಣಕ್ಕೆ ಸಿಗದೇ ರಸ್ತೆಯಲ್ಲೇ ತಲೆಕೆಳಗಾಗಿ ತಿರುಗಿದೆ. ಕಂಟ್ರೋಲ್ ತಪ್ಪಿದ ಕಾರು ನೇರವಾಗಿ ಎದುರು ಬರುತ್ತಿದ್ದ ಟ್ರಾಕ್ಟರ್‌ನ ಹಿಂಭಾಗಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಕಾರಣದಿಂದ ಕಾರಿನ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಯುವಕ ಶ್ರೀನಿವಾಸ್ ತೀವ್ರ ರಕ್ತಸ್ರಾವ ಹಾಗೂ ಆಘಾತದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನುಳಿದಂತೆ ಟ್ರಾಕ್ಟರ್ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಆನಂದಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಅಪಘಾತಕ್ಕೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದೆ.

Leave a Reply