ಕೊಡಗಿನಲ್ಲಿ ಕಾಡನೆ ದಾಳಿ: ನಿವೃತ್ತ ಐಪಿಎಸ್ ಅಧಿಕಾರಿ ಸುನಿಲ್ ಅಚಾಯ ಪತ್ನಿ ದುರ್ಮರಣ..!

ಕೊಡಗು: ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷ ತುತ್ತತುದಿಗೆ ತಲುಪಿದ್ದು, ಹೆಜ್ಜೆ ಹೆಜ್ಜೆಗೂ ಆನೆಗಳ ಭಯ ಜನರನ್ನು ಕಾಡುತ್ತಿದೆ. ದುಬಾರೆಯಲ್ಲಿ ಇತ್ತೀಚೆಗಷ್ಟೇ ಆನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ದುರಂತದ ನೆನಪು ಮಾಸುವ ಮುನ್ನವೇ, ಜಿಲ್ಲೆಯಲ್ಲಿ ಇಂದು ಮತ್ತೊಂದು ಭೀಕರ ಅವಘಡ ನಡೆದಿದೆ. ನಿವೃತ್ತ ಐಪಿಎಸ್ ಅಧಿಕಾರಿ ಸುನಿಲ್ ಅಚಾಯ ಅವರ ಪತ್ನಿ ಸಂಧ್ಯಾ ಅಚಾಯ (Sandya Achaya) ಅವರು ಕಾಡಾನೆ ದಾಳಿಗೆ ಸಿಲುಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ದಕ್ಷಿಣ ಕೊಡಗಿನ ಗೋಣಿಕೊಪ್ಪಲು ಸಮೀಪದ ಕೋನನಕಟ್ಟೆ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಮೃತ ಸಂಧ್ಯಾ ಅಚಾಯ ಅವರು ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತಮ್ಮ ತೋಟದ ಕೆಲಸಗಳನ್ನು ಪರಿಶೀಲಿಸಲು ಎಸ್ಟೇಟ್‌ಗೆ ತೆರಳಿದ್ದರು. ಈ ವೇಳೆ ಅವರ ಜೊತೆಯಲ್ಲಿ ಎಸ್ಟೇಟ್ ಮ್ಯಾನೇಜರ್ ಹಾಗೂ ಕಾರ್ ಚಾಲಕ ಕೂಡ ಇದ್ದರು. ಇವರೆಲ್ಲರೂ ತೋಟದಲ್ಲಿದ್ದಾಗ ಪೊದೆಯೊಳಗಿಂದ ಏಕಾಏಕಿ ಹೊರಬಂದ ಕಾಡಾನೆ ಇವರ ಮೇಲೆ ಭೀಕರವಾಗಿ ದಾಳಿ ನಡೆಸಿದೆ.

ಕಾಡಾನೆ ಒಮ್ಮಿಂದೊಮ್ಮೆಗೆ ದಾಳಿ ಮಾಡಲು ಮುಂದಾದಾಗ ಜೊತೆಯಲ್ಲಿದ್ದ ಎಸ್ಟೇಟ್ ಮ್ಯಾನೇಜರ್ ಮತ್ತು ಚಾಲಕ ಸಮಯಪ್ರಜ್ಞೆ ಮೆರೆದು ಅಲ್ಲಿಂದ ತಕ್ಷಣ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಸಂಧ್ಯಾ ಅಚಾಯ ಅವರಿಗೆ ಆನೆಯ ರಭಸದಿಂದ ತಪ್ಪಿಸಿಕೊಂಡು ಓಡಲು ಸಾಧ್ಯವಾಗಿಲ್ಲ. ಕೋಪೋದ್ರಿಕ್ತಗೊಂಡ ಕಾಡಾನೆ ಸಂಧ್ಯಾ ಅವರ ಮೇಲೆ ತೀವ್ರವಾಗಿ ದಾಳಿ ನಡೆಸಿ, ತುಳಿದು ಹಾಕಿದೆ. ಪರಿಣಾಮ ಅವರು ತೋಟದಲ್ಲೇ ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದರು.

ಆನೆ ಅಲ್ಲಿಂದ ತೆರಳಿದ ತಕ್ಷಣವೇ ಗಂಭೀರ ಸ್ಥಿತಿಯಲ್ಲಿದ್ದ ಸಂಧ್ಯಾ ಅವರನ್ನು ಮ್ಯಾನೇಜರ್ ಹಾಗೂ ಸ್ಥಳೀಯರು ಸೇರಿ ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿದರು. ಆದರೆ, ದೇಹದ ಒಳಭಾಗದಲ್ಲಿ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಬಿಂದು ಮಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಕಾಡಾನೆಗಳ ಸರಣಿ ದಾಳಿಗೆ ಅಮೂಲ್ಯ ಜೀವಗಳು ಬಲಿಯಾಗುತ್ತಿರುವುದಕ್ಕೆ ಕೊಡಗಿನ ಜನತೆ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *