ಸಂಚಾರಿ ಪೊಲೀಸರಿಗೆ ಬಿಸಿಲಿನಿಂದ ರಕ್ಷಣೆಗೆ ಮುಂದಾದ BNCC: ಪೈಲಟ್ ಯೋಜನೆಯಡಿ 20 ಎಸಿ ಹೆಲ್ಮೆಟ್ ವಿತರಣೆ

ಹಂಚಿಕೊಳ್ಳಿ

ಬೆಂಗಳೂರು: ಹೆಚ್ಚುತ್ತಿರುವ ತಾಪಮಾನ ಮತ್ತು ಬಿಸಿಲಿನ ಬೇಗೆಯಿಂದ ರಸ್ತೆಗಿಳಿದು ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರನ್ನು ರಕ್ಷಿಸಲು ಬೆಂಗಳೂರು ಉತ್ತರ ಮಹಾನಗರ ಪಾಲಿಕೆ (BNCC) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪೈಲಟ್ ಯೋಜನೆಯಡಿಯಲ್ಲಿ ನಗರದ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಎಸಿ ಹೆಲ್ಮೆಟ್‌ಗಳನ್ನು ವಿತರಿಸಲಾಗಿದೆ. 

ಹವಾಮಾನ ವೈಪರೀತ್ಯ ಮತ್ತು ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಹೊರಾಂಗಣದಲ್ಲಿ ಮತ್ತು ಸಿಗ್ನಲ್‌ಗಳಲ್ಲಿ ಗಂಟೆಗಟ್ಟಲೆ ನಿಂತು ಕೆಲಸ ಮಾಡುವ ಸಿಬ್ಬಂದಿಯ ಆರೋಗ್ಯ ರಕ್ಷಣೆ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 20 ಅತ್ಯಾಧುನಿಕ ಎಸಿ ಹೆಲ್ಮೆಟ್‌ಗಳನ್ನು ಸಂಚಾರಿ ಪೊಲೀಸರಿಗೆ ವಿತರಿಸಲಾಗಿದೆ.

ಹೀಟ್-ಹೆಲ್ತ್ ಪ್ರೊಟೊಕಾಲ್ ಅಡಿಯಲ್ಲಿ ಬೆಂಗಳೂರು ಉತ್ತರ ಮಹಾನಗರ ಪಾಲಿಕೆಯು C40 ಸಿಟೀಸ್, ಸೆನ್ಸಿಂಗ್ ಲೋಕಲ್ ಮತ್ತು ಹಸಿರು ದಳ ಸಂಸ್ಥೆಗಳ ಸಹಯೋಗದೊಂದಿಗೆ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕುರಿತು ಮಾಹಿತಿ ನೀಡಿರುವ ಬಿಎನ್‌ಸಿಸಿ ಕಮಿಷನರ್ ಪೊಮ್ಮಲ ಸುನಿಲ್ ಕುಮಾರ್, ಬಿಸಿಲಿನ ತಾಪದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ಹಿಂದೆಯೇ ಬಿಎನ್‌ಸಿಸಿ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಮತ್ತು ಒಣ ಕಸ ಸಂಗ್ರಹಣಾ ಕೇಂದ್ರದ ಕಾರ್ಮಿಕರಿಗೆ ಇಂತಹ ಕೂಲಿಂಗ್ ಕಿಟ್‌ಗಳನ್ನು ವಿತರಿಸಲಾಗಿತ್ತು ಹಾಗೂ ಈಗ ಇದನ್ನು ಸಂಚಾರಿ ಪೊಲೀಸರಿಗೂ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಹಾಗೂ ಇತರೆ ಸರ್ಕಾರಿ ಕಚೇರಿಗಳಿಗೂ ವಿಸ್ತರಿಸುವ ಪ್ರಸ್ತಾವನೆ ಇದೆ ಎಂದು ಕಮಿಷನರ್ ತಿಳಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ತಾಪಮಾನ ಹೆಚ್ಚಳದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು, ಹೀಟ್ ಸ್ಟ್ರೆಸ್ ಲಕ್ಷಣಗಳು, ತುರ್ತು ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸುರಕ್ಷತಾ ನಿಯಮಗಳ ಕುರಿತು ಸಂಚಾರಿ ಪೊಲೀಸರಿಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Advertisement


This will close in 3 seconds