ಭಟ್ಕಳದಲ್ಲಿ ತಣ್ಣಗಾಗದ ‘ಮುರಿನ್‌ ಕಟ್ಟೆ’ ವಿವಾದ : ಇಂದು ಮಧ್ಯಾಹ್ನದ ಬಳಿಕ ಭಟ್ಕಳ ಬಂದ್‌..!

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಮುರಿನ್‌ ಕಟ್ಟೆ (ಮೂರಿನ್ ಕಟ್ಟೆ) ವಿವಾದದ ಕಿಡಿ ಇನ್ನು ತಣ್ಣಗಾಗಿಲ್ಲ. ದಿನದಿಂದ ದಿನಕ್ಕೆ ಈ ವಿವಾದದ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಇಂದು (ಜೂನ್ 5) ಭಟ್ಕಳ ನಗರದಲ್ಲಿ ಭಾರಿ ಹೈಡ್ರಾಮಾ ಸೃಷ್ಟಿಯಾಗುವ ಸಾಧ್ಯತೆ ಇದೆ. ಮುರಿನ್ ಕಟ್ಟೆ ವಿಚಾರವಾಗಿ ಹಿಂದೂ ಪರ ಸಂಘಟನೆಗಳು ಇಂದು ಅಧಿಕೃತವಾಗಿ ಭಟ್ಕಳ ಬಂದ್‌ಗೆ (Bhatkal Bandh) ಕರೆ ನೀಡಿವೆ.

ಬಂದ್‌ಗೆ ಆಟೋ ಚಾಲಕರು, ಅಂಗಡಿ ಮಾಲೀಕರ ಭರ್ಜರಿ ಬೆಂಬಲ:

ಹಿಂದೂ ಪರ ಸಂಘಟನೆಗಳು ನೀಡಿರುವ ಈ ಬಂದ್ ಕರೆಗೆ ಸ್ಥಳೀಯವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಗರದ ಆಟೋ ರಿಕ್ಷಾ ಚಾಲಕರು ಹಾಗೂ ಪ್ರಮುಖ ಇಲಾಖೆಗಳು, ಮಾರುಕಟ್ಟೆಯ ಅಂಗಡಿ ಮುಂಗಟ್ಟುಗಳ ಮಾಲೀಕರು ಬಂದ್‌ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ಭಟ್ಕಳ ನಗರದಲ್ಲಿ ಸಂಪೂರ್ಣವಾಗಿ ಬಂದ್ ಆಚರಿಸಲು ಸಂಘಟನೆಗಳು ನಿರ್ಧರಿಸಿದ್ದು, ಬಂದ್ ಯಶಸ್ವಿಗೊಳಿಸಲು ಸುಮಾರು 10 ಸಾವಿರಕ್ಕೂ ಹೆಚ್ಚು ಜನರನ್ನು ಒಂದೆಡೆ ಸೇರಿಸಲು ಬೃಹತ್ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸುಳ್ಳು ಕೇಸ್ ಹಿಂಪಡೆಯಲು ಆಗ್ರಹ; ಸರ್ಕಾರಕ್ಕೆ ಖಡಕ್ ಎಚ್ಚರಿಕೆ:

ಮುರಿನ್ ಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದೆ ಎಂದು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. “ಕಾರ್ಯಕರ್ತರ ಮೇಲೆ ಹೂಡಿರುವ ಎಲ್ಲಾ ಸುಳ್ಳು ಕೇಸ್‌ಗಳನ್ನು ತಕ್ಷಣವೇ ಸರ್ಕಾರ ಹಿಂಪಡೆಯಬೇಕು. ಹಾಗೂ ವಿವಾದಿತ ಮುರಿನ್ ಕಟ್ಟೆಯನ್ನು ಯಥಾಸ್ಥಿತಿಯಲ್ಲಿ ಮರುನಿರ್ಮಾಣ ಮಾಡಿಕೊಡಬೇಕು. ಒಂದು ವೇಳೆ ಕಟ್ಟೆ ಮರುನಿರ್ಮಾಣವಾಗದಿದ್ದರೆ ಮುಂಬರುವ ದಿನಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು” ಎಂದು ಹಿಂದೂ ಸಂಘಟನೆಗಳು ಸರ್ಕಾರ ಹಾಗೂ ಸ್ಥಳೀಯ ಆಡಳಿತಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *