ಅಧಿಕಾರ ಸಿಕ್ಕ ಒಂದೇ ಗಂಟೆಯಲ್ಲಿ ಯು.ಟಿ. ಖಾದರ್ ಸರ್ಪ್ರೈಸ್ ವಿಸಿಟ್: ಕರ್ತವ್ಯ ಲೋಪವೆಸಗಿದ ವೈದ್ಯರಿಗೆ ವಾರ್ನಿಂಗ್!!

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಅತ್ಯಂತ ಮಹತ್ವದ ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸಚಿವ ಯು.ಟಿ ಖಾದರ್‌ (U. T. Khader), ಖಾತೆ ಹಂಚಿಕೆಯಾದ ಕೇವಲ ಒಂದೇ ಗಂಟೆಯ ಒಳಗಾಗಿ ಆಕ್ಷನ್ ಮೋಡ್‌ಗೆ ಇಳಿದಿದ್ದಾರೆ. ತಡರಾತ್ರಿ ಜಯನಗರದ ಸಾರ್ವಜನಿಕ ಆಸ್ಪತ್ರೆಗೆ (Jayanagar Hospital) ಯಾವುದೇ ಮುನ್ಸೂಚನೆ ನೀಡದೆ ಸರ್ಪ್ರೈಸ್ ವಿಸಿಟ್ (Surprise Visit) ನೀಡುವ ಮೂಲಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೊದಲ ದಿನವೇ ಬಿಸಿ ಮುಟ್ಟಿಸಿದ್ದಾರೆ.

ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವರು, ಅಲ್ಲಿನ ಸ್ವಚ್ಛತೆ ಹಾಗೂ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿದೆಯೇ ಎಂಬುದನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ರಾತ್ರಿ ಪಾಳಯದಲ್ಲಿ ತೀವ್ರ ಸಿಬ್ಬಂದಿ ಕೊರತೆ ಇರುವುದು ಸಚಿವರ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲದೆ, ಇದ್ದ ಸಿಬ್ಬಂದಿಗಳ ಪೈಕಿ ಇಬ್ಬರು ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಗೈರಾಗಿದ್ದರು (Absent). ಈ ಕರ್ತವ್ಯ ಲೋಪವನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸ್ಥಳದಲ್ಲಿದ್ದ ಸಿಬ್ಬಂದಿಗಳ ವಿರುದ್ಧ ತೀವ್ರವಾಗಿ ಗರಂ ಆದರು.

ಈ ಸರ್ಪ್ರೈಸ್ ವಿಸಿಟ್ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, “ಆಸ್ಪತ್ರೆಯ ನೈಜವಾದ ಪರಿಸ್ಥಿತಿ ಮತ್ತು ಅಲ್ಲಿನ ಲೋಪದೋಷಗಳನ್ನು ಕಣ್ಣಾರೆ ನೋಡಲು ನಾನು ಈ ಸಮಯದಲ್ಲಿ ಬಂದಿದ್ದೇನೆ. ಹಗಲಿನ ವೇಳೆಯಲ್ಲಿ ಬೇರೆ ಬೇರೆ ಅಧಿಕೃತ ಸಭೆಗಳು, ಕೆಲಸಗಳು ಇರುತ್ತವೆ. ಆದರೆ ಆಸ್ಪತ್ರೆಗಳ ಅಸಲಿ ಚಿತ್ರಣ ಸಿಗುವುದೇ ಇಂತಹ ರಾತ್ರಿ ವೇಳೆಯಲ್ಲಿ. ಇಂದು ಗೈರಾಗಿದ್ದ ಇಬ್ಬರು ವೈದ್ಯರಿಗೆ ಮೊದಲ ಹಂತವಾಗಿ ಎಚ್ಚರಿಕೆ ನೀಡುತ್ತೇನೆ. ಇಲಾಖೆಯ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜನರಿಗಾಗಿ ಕಟ್ಟುನಿಟ್ಟಾಗಿ ಕೆಲಸ ಮಾಡುವಂತೆ ಸೂಚಿಸುತ್ತೇನೆ. ಸರ್ಕಾರಿ ಆಸ್ಪತ್ರೆಗಳಿಗೆ ಬಡ ರೋಗಿಗಳು ಹೆಚ್ಚು ನಂಬಿಕೆಯಿಂದ ಬರುತ್ತಾರೆ, ಎಷ್ಟೇ ಜನ ರೋಗಿಗಳು ಬಂದರೂ ವೈದ್ಯರು ನಿರ್ಭಯವಾಗಿ ಚಿಕಿತ್ಸೆ ನೀಡುವಂತಹ ಉತ್ತಮ ವಾತಾವರಣವನ್ನು ನಾವು ಸೃಷ್ಟಿಸುತ್ತೇವೆ” ಎಂದರು.

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗಳ ಹಾವಳಿ ಹೆಚ್ಚಾಗಿರುವ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, “ಈ ಗಂಭೀರ ವಿಷಯದ ಬಗ್ಗೆ ಇಂದೇ ಇಲಾಖೆಯ ಪ್ರಮುಖ ಪರಿಶೀಲನಾ ಸಭೆಯನ್ನು ಕರೆಯಲಾಗಿದೆ. ಆ ಸಭೆಯಲ್ಲಿ ಈ ದಂಧೆಯ ಕುರಿತು ಸಂಪೂರ್ಣ ವಿಚಾರಣೆ ನಡೆಸಲಾಗುವುದು. ವ್ಯವಸ್ಥೆಯನ್ನು ಸುಧಾರಿಸಲು ಬರುವ ಎಲ್ಲಾ ಉತ್ತಮ ಸಲಹೆಗಳನ್ನು ಚರ್ಚಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಭರವಸೆ ನೀಡಿದರು.

Leave a Reply

Your email address will not be published. Required fields are marked *