ಸಭೆಯಲ್ಲೂ ಮುಂದುವರಿದ ಡಿಕೆಶಿ ‘ವಾಸ್ತು’ ನಿಯಮ!: ದಕ್ಷಿಣ ಬಿಟ್ಟು ಉತ್ತರ ದಿಕ್ಕಿಗೆ ಮುಖ ಮಾಡಿ ಕೂತ CM

ಬೆಂಗಳೂರು: ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ (DK Shivakumar) ಅವರ ‘ವಾಸ್ತು’ ನಿಯಮಗಳ ಪಾಲನೆ ವಿಧಾನಸೌಧದ ಒಳಗೂ ಅತ್ಯಂತ ಕಟ್ಟುನಿಟ್ಟಾಗಿ ಮುಂದುವರಿದಿದೆ. ನಿನ್ನೆ ವಿಧಾನಸೌಧಕ್ಕೆ ಉತ್ತರ ಬಾಗಿಲಿನಿಂದಲೇ ಪ್ರವೇಶಿಸಿದ್ದ ಅವರು, ಈ ಮುಂಚೆ “ಇನ್ಮುಂದೆ ನಾನು ಉತ್ತರ ದಿಕ್ಕಿಗೆ ಮುಖ ಮಾಡಿಯೇ ಸಭೆ ನಡೆಸುತ್ತೇನೆ” ಎಂದು ಹೇಳಿದ್ದರು. ತಮ್ಮ ಆ ಶಪಥದಂತೆಯೇ, ಇಂದು ನಡೆದ ಹಿರಿಯ ಅಧಿಕಾರಿಗಳ ಮೊದಲ ಅಧಿಕೃತ ಸಭೆಯಲ್ಲೂ ಸಮ್ಮೇಳನ ಸಭಾಂಗಣದ ಆಸನದ ದಿಕ್ಕನ್ನು ಬದಲಾಯಿಸಿ, ಉತ್ತರ ದಿಕ್ಕಿಗೆ (North Facing) ಮುಖ ಮಾಡಿಯೇ ಕುಳಿತು ಸಭೆ ನಡೆಸಿರುವುದು ವಿಧಾನಸೌಧದ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸತತ 3 ಗಂಟೆಗಳ ಹೈವೋಲ್ಟೇಜ್ ಮೀಟಿಂಗ್!

ಹೀಗೆ ವಾಸ್ತು ನಿಯಮದಂತೆ ಉತ್ತರದತ್ತ ಮುಖ ಮಾಡಿ ಕುಳಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸಿಎಂ ಆದ ಎರಡನೇ ದಿನವೇ ರಾಜ್ಯದ ಆಡಳಿತ ಮತ್ತು ಪೊಲೀಸ್ ಯಂತ್ರಕ್ಕೆ ಭರ್ಜರಿ ಚುರುಕು ಮುಟ್ಟಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸತತ 3 ಗಂಟೆಗಳಿಂದ ಹೈವೋಲ್ಟೇಜ್ ಸಭೆ ನಡೆಸುತ್ತಿರುವ ಸಿಎಂ, ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಇಲಾಖೆಗಳ ಸದ್ಯದ ವಸ್ತುಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು.

ಜನ ಮೆಚ್ಚುವಂತೆ ಕೆಲಸ ಮಾಡಿ, ಸರ್ಕಾರಕ್ಕೆ ಹೆಸರು ತನ್ನಿ:

ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು ಎಂದು ಬಣ್ಣಿಸಿದ ಸಿಎಂ ಡಿಕೆಶಿ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಲೇ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. “ಅಧಿಕಾರಿಗಳು ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಕ್ಕೆ ಮಣಿಯದೇ ಮುಕ್ತವಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ಕಷ್ಟಗಳಿಗೆ ಮತ್ತು ಜನರ ಭಾವನೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಿ, ಅಭಿವೃದ್ಧಿಯ ಹಾದಿಗೆ ಮೆಟ್ಟಿಲಾಗಿ ಕೆಲಸ ಮಾಡಿ. ಇದರಿಂದ ನಿಮಗೂ ಒಳ್ಳೆಯ ಹೆಸರು ಬರಲಿ, ಸರ್ಕಾರಕ್ಕೂ ಒಳ್ಳೆಯ ಹೆಸರು ತನ್ನಿ” ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.

15 ದಿನಗಳಲ್ಲಿ ‘ಆಕ್ಷನ್ ಪ್ಲಾನ್’ ನೀಡಲು ಗಡುವು:

ಅಧಿಕಾರಿಗಳೊಂದಿಗಿನ ಈ ಸುದೀರ್ಘ ಸಭೆಯಲ್ಲಿ ಸಿಎಂ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದರು. “ನಮ್ಮ ಹೊಸ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗಲಿದೆ ಮತ್ತು ಅಧಿಕಾರಿಗಳಿಂದ ನಾವೇನು ನಿರೀಕ್ಷಿಸುತ್ತೇವೆ ಎಂಬುದನ್ನು ಮೊದಲ ಸಭೆಯಲ್ಲೇ ಸ್ಪಷ್ಟಪಡಿಸಿದ್ದೇನೆ. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವುದು ಅನಿವಾರ್ಯ. ಮುಂಬರುವ 15 ದಿನಗಳ ಒಳಗಾಗಿ ರಾಜ್ಯದ ಎಲ್ಲಾ ಇಲಾಖೆಗಳು ತಮ್ಮ ಕಾರ್ಯವೈಖರಿಯ ಸಮಗ್ರ ‘ಆಕ್ಷನ್ ಪ್ಲಾನ್’ (Action Plan) ಸಿದ್ಧಪಡಿಸಿ ಸಲ್ಲಿಸಬೇಕು” ಎಂದು ಕಟ್ಟುನಿಟ್ಟಿನ ಡೆಡ್‌ಲೈನ್ ವಿಧಿಸಿದ್ದಾರೆ.

Leave a Reply

Your email address will not be published. Required fields are marked *