ನವದೆಹಲಿ: ದೇಶದ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI Airport) ಹಠಾತ್ ಸಂಭವಿಸಿದ ಬಿರುಗಾಳಿ ಸಹಿತ ಭಾರಿ ಮಳೆಗೆ ತಾಂತ್ರಿಕ ಉಪಕರಣಗಳು ಡಿಕ್ಕಿಯಾಗಿ ಏರ್ ಇಂಡಿಯಾ (Air India) ಸಂಸ್ಥೆಗೆ ಸೇರಿದ ಮೂರು ವಿಮಾನಗಳು ತೀವ್ರವಾಗಿ ಜಖಂಗೊಂಡಿವೆ. ಭಾನುವಾರ (ಜೂನ್ 7) ಸಂಜೆ 4:40ರ ಸುಮಾರಿಗೆ ವಿಮಾನ ನಿಲ್ದಾಣದ ಟರ್ಮಿನಲ್ 2ರ (Terminal 2) ಬಳಿ ಈ ಘಟನೆ ನಡೆದಿದ್ದು, ವಿಮಾನಗಳ ರೆಕ್ಕೆ ಹಾಗೂ ಇಂಜಿನ್ ಭಾಗಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಭಾನುವಾರ ಸಂಜೆ ಏಕಾಏಕಿ ಭಾರಿ ರಭಸದ ಬಿರುಗಾಳಿ ಬೀಸಲಾರಂಭಿಸಿದೆ. ಗಾಳಿಯ ತೀವ್ರತೆಗೆ ರನ್ವೇನಲ್ಲಿ ವಿಮಾನಗಳ ನಿರ್ವಹಣೆಗಾಗಿ ಇರಿಸಲಾಗಿದ್ದ ಕಬ್ಬಿಣದ ಏಣಿಗಳು (Steps) ಮತ್ತು ಇತರ ತಾಂತ್ರಿಕ ಉಪಕರಣಗಳು ನಿಯಂತ್ರಣ ತಪ್ಪಿ ರನ್ವೇನಲ್ಲೇ ವೇಗವಾಗಿ ಚಲಿಸಿವೆ. ಈ ಉಪಕರಣಗಳು ಅಲ್ಲಿ ನಿಲ್ಲಿಸಲಾಗಿದ್ದ ಏರ್ ಇಂಡಿಯಾದ ಮೂರು ವಿಮಾನಗಳಿಗೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಈ ಅವಾಂತರ ಸಂಭವಿಸಿದೆ.
ಘಟನೆಯಲ್ಲಿ ಹಾನಿಗೊಳಗಾದ ಮೂರೂ ವಿಮಾನಗಳು J320 (ವಿಮಾನ ಸಂಖ್ಯೆ) ಮಾದರಿಯದ್ದಾಗಿವೆ. ಅಪಘಾತದ ಬೆನ್ನಲ್ಲೇ ಸುರಕ್ಷತೆಯ ದೃಷ್ಟಿಯಿಂದ ಈ ಮೂರೂ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸದ್ಯ ಇಂಜಿನಿಯರ್ಗಳ ತಂಡ ರಿಪೇರಿ ಕೆಲಸದಲ್ಲಿ ನಿರತವಾಗಿದೆ. ಜಖಂಗೊಂಡಿರುವ ವಿಮಾನಗಳ ಪೈಕಿ ಎರಡು ವಿಮಾನಗಳು ಸಣ್ಣಪುಟ್ಟ ಹಾನಿ ಒಳಗಾಗಿದ್ದು, ಕೆಲವೇ ದಿನಗಳಲ್ಲಿ ಪುನಃ ಹಾರಾಟ ನಡೆಸಲಿವೆ. ಆದರೆ, ಮತ್ತೊಂದು ವಿಮಾನ ತೀವ್ರವಾಗಿ ಹಾನಿಗೊಳಗಾಗಿರುವುದರಿಂದ ಅದರ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ತಿಳಿದುಬಂದಿದೆ.
ವಿಮಾನ ನಿಲ್ದಾಣದ ಆಡಳಿತ ಮಂಡಳಿಯ ಪ್ರಕಾರ, ಏರ್ ಟ್ರಾಫಿಕ್ ಕಂಟ್ರೋಲ್ (ATC) ವತಿಯಿಂದ ಇಂತಹ ಹಠಾತ್ ಹವಾಮಾನ ವೈಪರೀತ್ಯದ ಬಗ್ಗೆ ಯಾವುದೇ ಮುಂಚಿತ ಮುನ್ಸೂಚನೆ ಅಥವಾ ಎಚ್ಚರಿಕೆ ಸಿಕ್ಕಿರಲಿಲ್ಲ. ಹೀಗಾಗಿ ರನ್ವೇನಲ್ಲಿದ್ದ ಉಪಕರಣಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಿಬ್ಬಂದಿಗೆ ಸಾಧ್ಯವಾಗಲಿಲ್ಲ, ಇದುವೇ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಕೇವಲ ಏರ್ ಇಂಡಿಯಾ ಮಾತ್ರವಲ್ಲದೆ, ಬಿರುಗಾಳಿಯ ರಭಸಕ್ಕೆ ಇತರೆ ಕೆಲವು ಖಾಸಗಿ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೂ ಸಣ್ಣಪುಟ್ಟ ಹಾನಿಯಾಗಿದೆ ಎಂದು ವರದಿಯಾಗಿದೆ.

Leave a Reply