ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹಾರ್ಡ್‌ವೇರ್ ಗೋದಾಮೊಂದು ಸಂಪೂರ್ಣವಾಗಿ ಹೊತ್ತಿ ಉರಿದು ಸುಟ್ಟು ಕರಕಲಾದ ದಾರುಣ ಘಟನೆ ನಡೆದಿದೆ.
ರಾತ್ರಿಯ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಉಗ್ರ ರೂಪ ತಾಳಿ ಇಡೀ ಗೋದಾಮಿಗೆ ಆವರಿಸಿಕೊಂಡಿದೆ. ಇದರಿಂದಾಗಿ ಗೋದಾಮಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಕ್ಷಣಾರ್ಧದಲ್ಲಿ ಬೆಂಕಿಗಾಹುತಿಯಾಗಿವೆ.

ಯಕ್ಸಂಬಾ ಪಟ್ಟಣದ ‘ಸಮೃದ್ಧಿ’ ಹೆಸರಿನ ಹಾರ್ಡ್‌ವೇರ್ ಗೋದಾಮಿನಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಒಳಗಡೆ ಶೇಖರಿಸಿಡಲಾಗಿದ್ದ ಪೈಪ್, ವೈಯರ್ ಸೇರಿದಂತೆ ಹಲವಾರು ಬೆಲೆಬಾಳುವ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಯು ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


Leave a Reply