ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಾವಂತವಾಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಅಂಬೋಲಿ ಫಾಲ್ಸ್ (Amboli Falls) ಬಳಿ ತಡರಾತ್ರಿ ಬೃಹತ್ ಗುಡ್ಡ ಕುಸಿದಿರುವ ಘಟನೆ ವರದಿಯಾಗಿದೆ. ಗುಡ್ಡದ ಮೇಲಿಂದ ಏಕಾಏಕಿ ನಾಲ್ಕು ಬೃಹತ್ ಗಾತ್ರದ ಬಂಡೆಗಳು ರಸ್ತೆಯ ಮೇಲೆಯೇ ಉರುಳಿ ಬಿದ್ದಿವೆ. ಅದೃಷ್ಟವಶಾತ್ ತಡರಾತ್ರಿ ವಾಹನ ಸಂಚಾರ ವಿರಳವಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ರಸ್ತೆಗೆ ಬಂಡೆಗಳು ಬಿದ್ದ ಪರಿಣಾಮ ಮಧ್ಯರಾತ್ರಿ ಕೆಲಹೊತ್ತು ಬೆಳಗಾವಿ ಹಾಗೂ ಸಿಂಧುದುರ್ಗ ನಡುವಿನ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.
ಸಮರೋಪಾದಿಯಲ್ಲಿ ತೆರವು ಕಾರ್ಯಾಚರಣೆ
ಗುಡ್ಡ ಕುಸಿದ ವಿಷಯ ತಿಳಿಯುತ್ತಿದ್ದಂತೆ ಸಿಂಧುದುರ್ಗ ಉಸ್ತುವಾರಿ ಸಚಿವ ನಿತೇಶ್ ರಾಣೆ ಅವರು ತಕ್ಷಣವೇ ಬಂಡೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಚಿವರ ಸೂಚನೆಯ ಮೇರೆಗೆ ಮಧ್ಯರಾತ್ರಿಯಿಂದಲೇ ಕಾರ್ಯಾಚರಣೆಗಿಳಿದ ಚಂದಗಡ ಅಗ್ನಿಶಾಮಕ ದಳದ ಸಿಬ್ಬಂದಿ, ಜೆಸಿಬಿ ಯಂತ್ರಗಳ ಮೂಲಕ ಬಂಡೆಗಳ ತೆರವು ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದಾರೆ. ಬಂಡೆಗಳ ತೆರವು ಕಾರ್ಯ ಇನ್ನೂ ಮುಂದುವರಿದಿದ್ದು, ಸದ್ಯಕ್ಕೆ ಮಹಾರಾಷ್ಟ್ರ ಪೊಲೀಸರು ಒಂದು ಮಾರ್ಗದಲ್ಲಿ (One-way) ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಪ್ರವಾಸಿಗರ ದಂಡು, ಬೆಳಗಾವಿ ನಿರ್ಬಂಧದ ಎಫೆಕ್ಟ್
ಅಂಬೋಲಿ ಫಾಲ್ಸ್ ಕೇವಲ ಮಹಾರಾಷ್ಟ್ರ ಮಾತ್ರವಲ್ಲದೆ, ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಪಾತವನ್ನು ಕಣ್ತುಂಬಿಕೊಳ್ಳಲು ವಾರಾಂತ್ಯದಲ್ಲಿ (Weekend) ಮೂರೂ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಲಗ್ಗೆ ಇಡುತ್ತಾರೆ. ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಜಲಪಾತಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಂಬೋಲಿಯತ್ತ ಮುಖ ಮಾಡುತ್ತಿದ್ದಾರೆ. ಇದೀಗ ಗುಡ್ಡ ಕುಸಿತದಿಂದಾಗಿ ಪ್ರವಾಸಿಗರಿಗೆ ಹಾಗೂ ವಾಹನ ಸವಾರರಿಗೆ ಆತಂಕ ಎದುರಾಗಿದೆ.


Leave a Reply