ಬೆಂಗಳೂರು ನಗರದ ಪ್ರಮುಖ ಟೋಲ್ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಟೋಲ್ ದರ ಏರಿಕೆಯ ಬಿಸಿ ತಟ್ಟಿದೆ. ನಿರ್ವಹಣಾ ವೆಚ್ಚ ಹಾಗೂ ವಾರ್ಷಿಕ ಪರಿಷ್ಕರಣೆಯ ಭಾಗವಾಗಿ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಹಾಗೂ ಅತ್ತಿಬೆಲೆ ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕವನ್ನು ಶೇ.10 ರಿಂದ 13ರವರೆಗೆ ಹೆಚ್ಚಿಸಲಾಗಿದೆ. ಈ ಹೊಸ ಟೋಲ್ ದರಗಳು 2027ರ ಜೂನ್ 30ರವರೆಗೆ ಚಾಲ್ತಿಯಲ್ಲಿರಲಿವೆ.
ನೈಸ್ ರಸ್ತೆಯ ಪರಿಷ್ಕೃತ ದರಗಳ ವಿವರ

ನೈಸ್ ರಸ್ತೆಯಲ್ಲಿ ಚಲಿಸುವ ದೂರಕ್ಕೆ ಅನುಗುಣವಾಗಿ ಕಾರುಗಳಿಗೆ ₹3 ರಿಂದ ₹8ರವರೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಹೊಸೂರು ರಸ್ತೆ–ಬನ್ನೇರುಘಟ್ಟ ರಸ್ತೆ ಮಾರ್ಗದ ಪರಿಷ್ಕೃತ ದರಗಳ ವಿವರ ಈ ಕೆಳಗಿನಂತಿದೆ:
* ಬೈಕ್: ಹಳೆಯ ದರ ₹30 ದಿಂದ ₹33 ಕ್ಕೆ ಏರಿಕೆ ಮಾಡಲಾಗಿದೆ.
* ಕಾರು: ಹಳೆಯ ದರ ₹65 ದಿಂದ ₹72 ಕ್ಕೆ ಹೆಚ್ಚಳವಾಗಿದೆ.
* ಬಸ್: ₹215 ದರ ನಿಗದಿಪಡಿಸಲಾಗಿದೆ.
* ಲಾರಿ: ₹141 ದರ ನಿಗದಿಪಡಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ದರಗಳ ವಿವರ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸಿಂಗಲ್ ಟ್ರಿಪ್ (ಒಂದು ಬಾರಿಯ ಪ್ರಯಾಣ) ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಒಂದೇ ದಿನ ಹಲವು ಬಾರಿ ಸಂಚರಿಸುವವರಿಗೆ (ಮಲ್ಟಿಪಲ್ ಟ್ರಿಪ್) ದರದಲ್ಲಿ ₹5 ಹೆಚ್ಚಳ ಮಾಡಲಾಗಿದೆ.
* ಕಾರು: ಸಿಂಗಲ್ ಟ್ರಿಪ್‌ಗೆ ₹65, ಮಲ್ಟಿಪಲ್ ಟ್ರಿಪ್‌ಗೆ ₹100, ಹಾಗೂ ಮಾಸಿಕ ಪಾಸ್‌ಗೆ ₹1,960 ದರ ನಿಗದಿ ಮಾಡಲಾಗಿದೆ.
* ಬೈಕ್: ಸಿಂಗಲ್ ಟ್ರಿಪ್‌ಗೆ ₹25, ಮಲ್ಟಿಪಲ್ ಟ್ರಿಪ್‌ಗೆ ₹40, ಹಾಗೂ ಮಾಸಿಕ ಪಾಸ್‌ಗೆ ₹785 ದರ ನಿಗದಿ ಮಾಡಲಾಗಿದೆ.
ನಿತ್ಯ ಪ್ರಯಾಣಿಕರಿಗೆ ಆರ್ಥಿಕ ಹೊರೆ
ಈ ದಿಢೀರ್ ಟೋಲ್ ದರ ಏರಿಕೆಯಿಂದಾಗಿ ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ಹಾಗೂ ಹೊಸೂರು ರಸ್ತೆ ಮಾರ್ಗವಾಗಿ ನಿತ್ಯ ಕಚೇರಿಗಳಿಗೆ ತೆರಳುವ ವಾಹನ ಸವಾರರಿಗೆ ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಇದರ ಜೊತೆಗೆ, ನೈಸ್ ರಸ್ತೆಯಲ್ಲಿ ಬಸ್ ಟೋಲ್ ಶುಲ್ಕ ಕೂಡ ಹೆಚ್ಚಳವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.


Leave a Reply