ರಾಕಿಂಗ್ ಸ್ಟಾರ್ ಯಶ್ ‘Toxic’ ಚಿತ್ರದ ‘ಲೇಡೀಸ್ ಆ್ಯಂಡ್ ಲೇಡೀಸ್’ ವಿಡಿಯೋ ರಿಲೀಸ್!

ಹಂಚಿಕೊಳ್ಳಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairytale for Grown-Ups) ಚಿತ್ರದ ಪ್ರಪಂಚ ಮತ್ತಷ್ಟು ಕೌತುಕ ಮೂಡಿಸಿದೆ. ಚಿತ್ರತಂಡ ಇದೀಗ ‘ಲೇಡೀಸ್ ಆ್ಯಂಡ್ ಲೇಡೀಸ್’ (Ladies & Ladies) ಎಂಬ ಹೊಚ್ಚಹೊಸ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದು, ಚಿತ್ರದ ಡಾರ್ಕ್ ಹಾಗೂ ಸ್ಟೈಲಿಶ್ ಜಗತ್ತಿನಲ್ಲಿ ಮಹಿಳಾ ಶಕ್ತಿಯನ್ನು ಅನಾವರಣಗೊಳಿಸಿದೆ. ಈ ಆಕ್ಷನ್-ಪ್ಯಾಕ್ಡ್ ವಿಡಿಯೋದಲ್ಲಿ ಮಹಿಳೆಯರ ಶಕ್ತಿ, ರಹಸ್ಯ ಮತ್ತು ಅಬ್ಬರವನ್ನು ಎತ್ತಿ ತೋರಿಸಲಾಗಿದ್ದು, ಅವರು ಯಾರಿಗೂ ತಲೆಬಾಗುವವರಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಘಟಾನುಘಟಿ ನಟಿಯರ ದಂಡು ಹಾಗೂ ಪಾತ್ರಗಳ ಝಲಕ್

​ಈ ಬಹುತಾರಾಗಣದ ಚಿತ್ರದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಸ್ಯಾಂಡಲ್‌ವುಡ್ ಪ್ರತಿಭೆ ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಲಿದ್ದಾರೆ. ವಿಡಿಯೋದಲ್ಲಿ ನಯನತಾರಾ ಅವರ ದಿಟ್ಟತನ, ಕಿಯಾರಾ ಅವರ ಕಾಂತೀಯ ಹಾಗೂ ಕೊಂಚ ಮಂಕಾದ ಎನರ್ಜಿ, ತಾರಾ ಅವರ ಬಿಂದಾಸ್ ಲುಕ್, ರುಕ್ಮಿಣಿ ವಸಂತ್ ಅವರ ಉಗ್ರ ತೀವ್ರತೆ ಮತ್ತು ಹುಮಾ ಅವರ ಕಣ್ಣುಗಳ ರಹಸ್ಯ ನೋಟವು ಪ್ರತಿಯೊಬ್ಬರ ಪಾತ್ರದ ತೂಕವನ್ನು ಪರಿಚಯಿಸಿದೆ. ಇದರ ಜೊತೆಗೆ ಕೇಳಿಬರುವ ಹಿನ್ನೆಲೆ ಧ್ವನಿಯು ಮಹಿಳೆಯರ ದೃಷ್ಟಿಕೋನವನ್ನು ಹೇಳುತ್ತಾ, ಕಥೆಗೆ ಮತ್ತಷ್ಟು ನಿಗೂಢತೆ ಹಾಗೂ ಬಂಡಾಯದ ಸ್ಪರ್ಶ ನೀಡಿದೆ.

ಮಕ್ಕಳಿಗಿಲ್ಲ ಪ್ರವೇಶ: ಎಚ್ಚರಿಕೆಯ ಬೋಲ್ಡ್ ಡಿಸ್ಕ್ಲೈಮರ್!

​ಬಿಡುಗಡೆಯಾದ ವಿಡಿಯೋದ ಮೊದಲ ಫ್ರೇಮ್‌ನಲ್ಲಿಯೇ ಚಿತ್ರದ ಬಂಡಾಯದ ಮನೋಭಾವವನ್ನು ಸಾರುವಂತಹ ಎಚ್ಚರಿಕೆಯ ಸಂದೇಶವಿದೆ. “ಮಕ್ಕಳೇ… ದೂರವಿರಿ. ಪೋಷಕರೇ… ನಿಮ್ಮ ಮಕ್ಕಳು ದೂರವಿರುವಂತೆ ನೋಡಿಕೊಳ್ಳಿ. ಅಜ್ಜ-ಅಜ್ಜಿಯರೇ… ನಿಮ್ಮ ಮೊಮ್ಮಕ್ಕಳನ್ನು ದೂರವಿಡಿ. ಮುತ್ತಜ್ಜ-ಮುತ್ತಜ್ಜಿಯರೇ… ನೋಡಿದರೆ ಅದು ನಿಮ್ಮದೇ ರಿಸ್ಕ್” ಎಂಬ ಬೋಲ್ಡ್ ವಾರ್ನಿಂಗ್ ಮೂಲಕ ಇದೊಂದು ಪಕ್ಕಾ ವಯಸ್ಕರ (Grown-Ups) ಕಥೆ ಎಂಬುದನ್ನು ಚಿತ್ರತಂಡ ಸಾರಿ ಹೇಳಿದೆ.

ಆಗಸ್ಟ್ 2026ಕ್ಕೆ ವಿಶ್ವಾದ್ಯಂತ ಬಿಡುಗಡೆ

​ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಿರುವ ಹಾಗೂ ನಟ ಯಶ್ ತಾವೇ ನಿರ್ಮಿಸಿ, ನಾಯಕರಾಗಿ ನಟಿಸಿರುವ ‘ಟಾಕ್ಸಿಕ್’ ಚಿತ್ರವು ಪ್ರೇಕ್ಷಕರಿಗೆ ವಿಭಿನ್ನವಾದ ಸಿನಿಮಾ ಅನುಭವ ನೀಡುವ ಭರವಸೆ ಮೂಡಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಲಿದ್ದು, ಆಗಸ್ಟ್ 26, 2026 ರಂದು (ಬುಧವಾರ) ವಿಶ್ವಾದ್ಯಂತ ಬೃಹತ್ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *